ಇಂಡಿಯಾ ಮೈತ್ರಿಕೂಟ ತೊರೆಯದಿದ್ದರೆ ಕೆಲವೇ ದಿನಗಳಲ್ಲಿ ಕೇಜ್ರಿವಾಲ್‌ರನ್ನು ಬಂಧಿಸುವ ಬೆದರಿಕೆ: ಬಿಜೆಪಿ ವಿರುದ್ಧ ಆಪ್ ಆರೋಪ
ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟವನ್ನು ಆಪ್ ನಾಯಕರು ಕೂಡಲೇ ತೊರೆಯಬೇಕು. ಇಲ್ಲವಾದರೆ ಕೇಂದ್ರ ತನಿಖಾ ತಂಡ ಹಾಗೂ ಜಾರಿ ನಿರ್ದೇಶನಾಲಯವು ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಿವೆ ಎಂದು ಬಿಜೆಪಿ ಬೆದರಿಸುತ್ತಿದೆ ಎಂದು ಆಪ್‌ನ ಹಿರಿಯ ನಾಯಕಿ ಅತಿಶಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, "ಆಪ್ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯ ಮಾತುಕತೆಯು ಕೊನೆ ಹಂತ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಪ್ರಕಟಣೆ ಹೊರ ಬೀಳಲಿರುವುದು ನಿಮಗೆಲ್ಲ ತಿಳಿದೇ ಇದೆ. ಆದರೆ, ಈ ಸುದ್ದಿ ಬಹಿರಂಗವಾದಾಗಿನಿಂದ ಆಪ್ ಶಾಸಕರ ಮೊಬೈಲ್‌ಗಳಿಗೆ ಸಂದೇಶಗಳ ಮಹಾಪೂರ ಹರಿದು ಬರುತ್ತಿದ್ದು, ಇಂಡಿಯಾ ಮೈತ್ರಿಕೂಟವನ್ನು ತೊರೆಯುವಂತೆ ಬಿಜೆಪಿ ಬೆದರಿಕೆ ಒಡ್ಡುತ್ತಿದೆ. ಒಂದು ವೇಳೆ ಕೂಡಲೇ ಆಪ್ ನಾಯಕರು ಇಂಡಿಯಾ ಮೈತ್ರಿಕೂಟ ತೊರೆಯದಿದ್ದರೆ, ಶನಿವಾರ ಅಥವಾ ಸೋಮವಾರದಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಕೇಂದ್ರ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯವು ಬಂಧಿಸಲಿವೆ ಎಂದು ಬೆದರಿಕೆ ಒಡ್ಡಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
ಆದರೆ, ಅತಿಶಿಯವರ ಆರೋಪವನ್ನು ದಿಲ್ಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ್ ಅಲ್ಲಗಳೆದಿದ್ದಾರೆ.