ಹರ್ಯಾಣದಲ್ಲಿ ಕಾಂಗ್ರೆಸ್- ಆಪ್ ಮೈತ್ರಿ ಬಹುತೇಕ ಅಸಾಧ್ಯ | 50 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸುವ ಸಾಧ್ಯತೆ

Update: 2024-09-06 14:53 GMT

Photo : indianexpress

ಚಂಡೀಗಢ : ಮುಂಬರುವ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಪ್ ಮಧ್ಯೆ ಮೈತ್ರಿ ಏರ್ಪಡುವ ಸಾಧ್ಯತೆ ಬಹುತೇಕ ಅಸಂಭವ ಎಂದು ಶುಕ್ರವಾರ ಆಪ್ ಮೂಲಗಳು ತಿಳಿಸಿವೆ ಎಂದು The Indian Express ವರದಿ ಮಾಡಿದೆ.

ರವಿವಾರ ಆಪ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಏಕಾಂಗಿಯಾಗಿ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತಿದೆ ಎಂದು ವರದಿಯಾಗಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಎರಡೂ ಪಕ್ಷಗಳು ಹರ್ಯಾಣದಲ್ಲಿ ಮೈತ್ರಿ ಮಾಡಿಕೊಂಡಿದ್ದವು.

ಇದಕ್ಕೂ ಮುನ್ನ, ಸೋಮವಾರ ನಡೆದಿದ್ದ ಕೇಂದ್ರ ಚುನಾವಣಾ ಸಮಿತಿಯ ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಪ್ ನೊಂದಿಗೆ ಮೈತ್ರಿ ಸಾಧ್ಯತೆ ಕುರಿತು ಒಲವು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಹಗ್ಗ ಜಗ್ಗಾಟವು ಎರಡೂ ಪಕ್ಷಗಳನ್ನು ದೂರ ಮಾಡಿದ್ದು, ಕಾಂಗ್ರೆಸ್ ರಾಜ್ಯ ಘಟಕ, ವಿಶೇಷವಾಗಿ ಭೂಪಿಂದರ್ ಸಿಂಗ್ ಹೂಡಾ ಬಣವು ಈ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸುತ್ತಿದೆ. ಈ ಮೈತ್ರಿಯ ಬಗ್ಗೆ ಕಾಂಗ್ರೆಸ್ ನೊಳಗೆ ಭಾರಿ ಅಸಮ್ಮತಿಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರಿಂದ ಹರ್ಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಪಕ್ಷದ ಸಭೆಯೊಂದರಿಂದ ಹೊರ ನಡೆದ ಘಟನೆಯೂ ನಡೆದಿತ್ತು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ, ಬುಧವಾರದಂದು ಹರ್ಯಾಣದ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾದ ದೀಪಕ್ ಬಾಬರಿಯ ಮೈತ್ರಿ ಮಾತುಕತೆಗಳು ಮುಂದುವರಿದಿವೆ ಎಂದು ಹೇಳಿದ್ದರು. ನಂತರ ಆಪ್ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರು ಬಾಬರಿಯ ಅವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News