ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ರಾಜಿನಾಮೆ ನೀಡಿದ್ದ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿಗೆ ಸೇರ್ಪಡೆ
ಕೊಲ್ಕತ್ತಾ: ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಗುರುವಾರ ಕೋಲ್ಕತ್ತಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಮ್ಮುಖದಲ್ಲಿ ಗಂಗೋಪಾಧ್ಯಾಯ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಹೈಕೋರ್ಟ್ ನ್ಯಾಯಾಧೀಶರನ್ನು ʼನರೇಂದ್ರ ಮೋದಿ ಪರಿವಾರʼಕ್ಕೆ ಸ್ವಾಗತಿಸಿದ ಮಜುಂದಾರ್ "ಬಂಗಾಳದ ವಂಚಿತ, ಶೋಷಿತ ಸಂತ್ರಸ್ತರಿಗೆ ನ್ಯಾಯವಾಗಿ ಅವರು (ಗಂಗೋಪಾಧ್ಯಾಯ) ಕೆಲಸ ಮಾಡಿದ ರೀತಿಯನ್ನು ನಾನು ನಂಬುತ್ತೇನೆ, ಅವರು ಬಿಜೆಪಿಯ ನಾಯಕತ್ವದೊಂದಿಗೆ ಆ ಕೆಲಸವನ್ನು ಮುಂದುವರೆಸುತ್ತಾರೆ" ಎಂದು ಹೇಳಿದ್ದಾರೆ.
ಮಂಗಳವಾರ, ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಗಂಗೋಪಾಧ್ಯಾಯ ಅವರು ಗುರುವಾರ ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದರು.
ಗಂಗೋಪಾಧ್ಯಾಯ ಅವರ ಘೋಷಣೆಗೆ ಪ್ರತಿಕ್ರಿಯಿಸಿದ್ದ ರಾಜ್ಯದ ಆಡಳಿತಾರೂಢ ಟಿಎಂಸಿ ವಕ್ತಾರ ದೇಬಾಂಗ್‌ಶು ಭಟ್ಟಾಚಾರ್ಯ ಅವರು, “ಅವರು ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ನಾವು ದೀರ್ಘಕಾಲದಿಂದ ಹೇಳುತ್ತಲೇ ಬಂದಿದ್ದೇವೆ, ಅದು ಈಗ ಸಾಬೀತಾಗಿದೆ" ಎಂದು ಹೇಳಿದ್ದಾರೆ.