ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಪೊಲೀಸರು ತನಿಖೆ ನಡೆಸುವ ಸಾಮರ್ಥ್ಯ ಹೊಂದಿಲ್ಲ: ಸುಪ್ರೀಂ ಕೋರ್ಟ್ ಅಸಮಾಧಾನ
ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತಂತೆ ಅಲ್ಲಿನ ಪೊಲೀಸರಿಂದ ನಡೆಯುತ್ತಿರುವ ತನಿಖೆ “ಜಡತ್ವದಿಂದ” ಕೂಡಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳುವ ಮೂಲಕ ಕೇಂದ್ರ ಮತ್ತು ಮಣಿಪುರ ಸರ್ಕಾರಗಳಿಗೆ ಮಾತಿನ ಛಾಟಿಯೇಟು ಬೀಸಿದೆ.
ಹಿಂಸಾತ್ಮಕ ಘಟನೆಗಳು ನಡೆದು ಸುಮಾರು ಮೂರು ತಿಂಗಳುಗಳೇ ಸಂದರೂ ಎಫ್‌ಐಆರ್‌ಗಳು ದಾಖಲಾಗದೇ ಇರುವುದು ಮತ್ತು ಇಲ್ಲಿಯ ತನಕ ದಾಖಲಾಗಿರುವ 6000 ಎಫ್‌ಐಆರ್‌ಗಳಲ್ಲಿ ಕೆಲವೇ ಕೆಲವು ಮಂದಿಯನ್ನು ಬಂಧಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಆಘಾತ ವ್ಯಕ್ತಪಡಿಸಿದೆಯಲ್ಲದೆ ಶುಕ್ರವಾರ ಅಪರಾಹ್ನ 2 ಗಂಟೆಗೆ ಮಣಿಪುರದ ಪೊಲೀಸ್ ಮಹಾನಿರ್ದೇಶಕರು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಆದೇಶಿಸಿದೆ.
“ಆರಂಭಿಕ ಮಾಹಿತಿ ಅವಲೋಕಿಸಿದಾಗ ತನಿಖೆ ತೀರಾ ನಿಧಾನವಾಗಿದೆ ಎಂಬುದು ಹೊರನೋಟಕ್ಕೆ ತಿಳಿದು ಬರುತ್ತದೆ. ಘಟನೆ ನಡೆದು ನಂತರ ಎಫ್‌ಐಆರ್ ದಾಖಲಾಗುವಲ್ಲಿ ವಿಳಂಬ ಮತ್ತು ಸಾಕ್ಷಿಗಳ ಹೇಳಿಕೆಗೆಳ ದಾಖಲಾತಿಗಳಲ್ಲೂ ಕರ್ತವ್ಯಲೋಪವಾಗಿದೆ ಹಾಗೂ ಕೆಲವೇ ಕೆಲ ಮಂದಿಯನ್ನು ಬಂಧಿಸಲಾಗಿದೆ. ಮಣಿಪುರ ಡಿಜಿಪಿ ಅವರು ಶುಕ್ರವಾರ 2 ಗಂಟೆಗೆ ಹಾಜರಾಗಿ ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಬೇಕು,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಣಿಪುರ ಹಿಂಸಾಚಾರದ ಕುರಿತು ದಾಖಲಾದ ಹಲವು ಅರ್ಜಿಗಳು ಹಾಗೂ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ನಡೆಸುತ್ತಿದೆ.
ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ ಇಲ್ಲಿಯ ತನಕ 6532 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಹಾಗೂ ಅವುಗಳಲ್ಲಿ 11 ಪ್ರಕರಣಗಳು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಾಗಿವೆ ಎಂದರು.
ಇತ್ತೀಚೆಗೆ ವೈರಲ್ ಆದ ವೀಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧನ ಯಾವಾಗ ನಡೆಯಿತು ಎಂದು ನ್ಯಾಯಾಲಯ ಕೇಳಿದಾಗ ನಿರ್ದಿಷ್ಟ ಉತ್ತರವನ್ನು ಸಾಲಿಸಿಟರ್ ಜನರಲ್ ಅವರಿಗೆ ನೀಡಲಾಗಲಿಲ್ಲ ಹಾಗೂ ವೀಡಿಯೋ ಹೊರಬಿದ್ದ ನಂತರ ಎಂದು ಹೇಳಿದರು.
“ಮೇ 4ರಂದು ನಡೆದ ಗಂಭೀರ ಘಟನೆಯ ಎಫ್‌ಐಆರ್ ಜುಲೈ 7ರಂದು ದಾಖಲಾಗಿದೆ,” ಎಂಬ ಅಂಶವನ್ನು ಸಿಜೆಐ ತಿಳಿದು ಆಘಾತ ವ್ಯಕ್ತಪಡಿಸಿದರು.
“ರಾಜ್ಯ ಪೊಲೀಸರು ತನಿಖೆ ನಡೆಸುವ ಸಾಮರ್ಥ್ಯ ಹೊಂದಿಲ್ಲ, ಪರಿಸ್ಥಿತಿ ಅವರ ನಿಯಂತ್ರನ ಮೀರಿದೆ, 6000 ಎಫ್‌ಐಆರ್‌ಗಳಲ್ಲಿ ಕೇವಲ 7 ಬಂಧನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದಾಗ ಮಾತನಾಡಿದ ಸಾಲಿಸಿಟರ್ ಜನರಲ್, ವೈರಲ್ ವೀಡಿಯೋ ಪ್ರಕರಣ ಕುರಿತಂತೆ 7 ಮಂದಿಯ ಬಂಧನವಾಗಿದೆ ಹಾಗೂ 250 ಮಂದಿಯನ್ನು ಬಂಧಿಸಲಾಗಿದ್ದರೆ 12000 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ ಎಂದರು.
ಪರಿಸ್ಥಿತಿಯ ಸಂಪೂರ್ಣ ಅವಲೋಕನ, ಪುನರ್ವಸತಿ ಮುಂತಾದ ವಿಚಾರಗಳತ್ತ ಗಮನ ಹರಿಸಲು ಮಾಜಿ ಹೈಕೋರ್ಟ್ ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು ರಚಿಸುವ ಸಾಧ್ಯತೆಯ ಕುರಿತು ಸಿಜೆಐ ಸುಳಿವು ನೀಡಿದರು.