ಸಂಸತ್ತಿನಲ್ಲಿ ನಿಂದನಾತ್ಮಕ ಹೇಳಿಕೆ: ಬಿಜೆಪಿ ಸಂಸದ ರಮೇಶ್ ಬಿಧೂರಿಗೆ ನಾಲ್ಕು ವರ್ಷಗಳ ಹಿಂದೆಯೂ ಜಾರಿಯಾಗಿದ್ದ ನೋಟಿಸ್
ಹೊಸದಿಲ್ಲಿ: ಸಂಸತ್ತಿನಲ್ಲಿ ನಿಂದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ದಕ್ಷಿಣ ದಿಲ್ಲಿಯ ಬಿಜೆಪಿ ಸಂಸದ ರಮೇಶ್ ಬಿಧೂರಿಗೆ ಪಕ್ಷವು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೆ, ಇದಕ್ಕೂ ಮುನ್ನ ನಾಲ್ಕು ವರ್ಷಗಳ ಹಿಂದೆಯೂ ಅವರಿಗೆ ಪಕ್ಷವು ಮತ್ತೊಂದು ನೋಟಿಸ್ ಜಾರಿಗೊಳಿಸಿತ್ತು ಎಂಬ ಸಂಗತಿಯನ್ನು ಪಕ್ಷದ ಮೂಲಗಳು ಬಹಿರಂಗಪಡಿಸಿವೆ. ಹೀಗಿದ್ದೂ, ರಮೇಶ್ ಬಿಧೂರಿ ವಿರುದ್ಧ ಬಿಜೆಪಿ ರಾಜ್ಯ ಘಟಕವು ಏನಾದರೂ ಕ್ರಮ ಕೈಗೊಳ್ಳಲಿದೆಯೆ ಎಂಬ ಕುತೂಹಲವಿದೆ ಎಂದೂ ಮೂಲಗಳು ಹೇಳಿವೆ ಎಂದು indianexpress.com ವರದಿ ಮಾಡಿದೆ.
ಅಕ್ಟೋಬರ್, 2018ರಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 143ನೇ ಜನ್ಮದಿನದ ಅಂಗವಾಗಿ ದಕ್ಷಿಣ ದಿಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಏಕತೆಗಾಗಿ ಓಟ’ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ವಿಚಾರವಾಗಿ ಸಂಗಮ್ ವಿಹಾರ್ ಕೌನ್ಸಿಲರ್ ಚಂದನ್ ಕುಮಾರ್ ಚೌಧರಿ ಹಾಗೂ ರಮೇಶ್ ಬಿಧೂರಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿತ್ತು ಎಂಬ ಸಂಗತಿಯನ್ನೂ ಮೂಲಗಳು ತಿಳಿಸಿವೆ.
“ಈ ಘಟನೆಯ ಕುರಿತು ದಿಲ್ಲಿಯ ಬಿಜೆಪಿ ಅಧ್ಯಕ್ಷ ಹಾಗೂ ಈಶಾನ್ಯ ದಿಲ್ಲಿಯ ಸಂಸದರಾಗಿದ್ದ ಮನೋಜ್ ತಿವಾರಿ ಅವರು ಬಿಧೂರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. ದಿಲ್ಲಿ ಘಟಕದ ಅಧ್ಯಕ್ಷರಾಗಿರುವ ನೀವು ನನಗೆ ನೋಟಿಸ್ ನೀಡಲು ಯಾವುದೇ ಅಧಿಕಾರವಿಲ್ಲ ಎಂದು ರಮೇಶ್ ಬಿಧೂರಿ ಪ್ರತಿಕ್ರಿಯಿಸಿದ ನಂತರ ಆ ವಿಷಯವನ್ನು ಮುಚ್ಚಿ ಹೋಗಿತ್ತು” ಎಂದು ಮೂಲವೊಂದು ತಿಳಿಸಿದೆ.
“ಈಗಲೂ ಕೂಡಾ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಕುರಿತು ಪಕ್ಷದಲ್ಲಿ ಭಿನ್ನಮತವಿದೆ. ಲೋಕಸಭೆಯಲ್ಲಿ ನೀಡಿರುವ ಹೇಳಿಕೆಯ ಕುರಿತು ನೀಡಲಾಗಿರುವ ಶೋಕಾಸ್ ನೋಟಿಸ್ ನಿಂದ ಅವರಿಗೇನು ಆಗದು” ಎಂದು ಮೂಲಗಳು ತಿಳಿಸಿವೆ.
ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡಿರುವ ರಮೇಶ್ ಬಿಧೂರಿಗೆ 2009ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ, 2014 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡಲಾಗಿತ್ತು ಎಂದು ಹೇಳಲಾಗಿದೆ.