ಜೈಲಿನಲ್ಲಿರುವ ಆರೋಪಿ ಬೇರೊಂದು ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಬಹುದು : ಸುಪ್ರೀಂ ಕೋರ್ಟ್

Update: 2024-09-09 14:55 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ : ಪ್ರಕರಣವೊಂದರಲ್ಲಿ ಬಂಧನದಲ್ಲಿರುವ ಆರೋಪಿಯು ಬೇರೊಂದು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರದಿದ್ದರೆ ಆತ ಆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಲು ಅರ್ಹನಾಗಿದ್ದಾನೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಎತ್ತಿ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಜೈಲಿನಲ್ಲಿರುವ ಆರೋಪಿ ಬೇರೊಂದು ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅರ್ಹನಾಗಿದ್ದಾನೆಯೇ ಎಂಬ ಕಾನೂನು ಪ್ರಶ್ನೆಯನ್ನು ಕೈಗೆತ್ತಿಕೊಂಡಿತ್ತು.

ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರುವವರೆಗೂ ನಿರೀಕ್ಷಣಾ ಜಾಮೀನು ಕೋರಲು ಆತ ಅರ್ಹನಾಗಿರುತ್ತಾನೆ ಮತ್ತು ಆ ಪ್ರಕರಣದಲ್ಲಿ ಆತನನ್ನು ಬಂಧಿಸಿದರೆ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವುದು ಏಕಮಾತ್ರ ಪರಿಹಾರವಾಗಿದೆ ಎಂದು ನ್ಯಾ.ಪರ್ದಿವಾಲಾ ಅವರು ತೀರ್ಪು ಪ್ರಕಟಣೆ ಸಂದರ್ಭದಲ್ಲಿ ಹೇಳಿದರು.

2023ರಲ್ಲಿ ಧನರಾಜ ಅಸ್ವಾನಿ ಎನ್ನುವವರು ಕಾನೂನು ಪ್ರಶ್ನೆಯನ್ನು ಮುಂದಿಟ್ಟು ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಾಲಯವು ತೀರ್ಪು ನೀಡಿದೆ.

ಆರೋಪಿಯು ಇನ್ನೊಂದು ಅಪರಾಧಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದರೆ ಆತನಿಗೆ ನಿರೀಕ್ಷಣಾ ಜಾಮೀನನ್ನು ನೀಡಲು ಸೆಷನ್ಸ್ ಅಥವಾ ಉಚ್ಚ ನ್ಯಾಯಾಲಯವನ್ನು ತಡೆಯುವ ಯಾವುದೇ ಸ್ಪಷ್ಟ ಅಥವಾ ಸೂಚ್ಯ ನಿರ್ಬಂಧವಿಲ್ಲ. ಹಾಗೆ ಮಾಡಿದರೆ ಅದು ಶಾಸಕಾಂಗದ ಉದ್ದೇಶಕ್ಕೆ ವಿರುದ್ಧವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News