ತಮಿಳುನಾಡು, ಕರ್ನಾಟಕ ಜನರ ನಡುವೆ ದ್ವೇಷ ಹರಡಿದ ಆರೋಪ: ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲು
Update: 2024-03-20 10:35 GMT
ಮದುರೈ: ಭಾಷೆಯ ಆಧಾರದಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷ ಹರಡಿದ ಆರೋಪದ ಮೇಲೆ ಮದುರೈ ನಗರ ಪೊಲೀಸರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟದ ಕುರಿತು ನಿನ್ನೆ ಹೇಳಿಕೆ ನೀಡಿದ್ದ ಕರಂದ್ಲಾಜೆ, “ತಮಿಳುನಾಡಿನ ವ್ಯಕ್ತಿಗಳು ಕರ್ನಾಟಕಕ್ಕೆ ಬಂದು ತರಬೇತಿ ಪಡೆದು, ಕರ್ನಾಟಕದಲ್ಲಿ ಬಾಂಬ್ ಇಡುತ್ತಿದ್ದಾರೆ” ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಲವಾಗಿ ಖಂಡಿಸಿದ್ದರು. ನಂತರ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಕಡಚನೆಂತಲ್ ನಿವಾಸಿ ಸಿ.ತ್ಯಾಗರಾಜನ್ ಎಂಬುವವರ ದೂರನ್ನು ಆಧರಿಸಿ ಶೋಭಾ ಕರಂದ್ಲಾಜೆ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 153, 153ಎ, 505 (1) (ಬಿ) ಹಾಗೂ 505 (2) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.