ಸರ್ವಾನುಮತದಿಂದ ಜಿ20 ಘೋಷಣೆ ಅಂಗೀಕಾರ

Update: 2023-09-09 16:46 GMT

ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ: ಇಪ್ಪತ್ತು ದೇಶಗಳ ಗುಂಪು ಜಿ20ಯ ಶೃಂಗ ಸಮ್ಮೇಳನದ ಘೋಷಣೆ ‘ಹೊಸದಿಲ್ಲಿ ನಾಯಕರ ಘೋಷಣೆ’ (ನ್ಯೂಡೆಲ್ಲಿ ಲೀಡರ್ಸ್ ಡಿಕ್ಲರೇಶನ್)ಯನ್ನು ಅಂಗೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು. ರಶ್ಯ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಘೋಷಣೆ ಅಂಗೀಕಾರವಾಗಿರುವುದು ಭಾರತದ ಜಿ20 ಅಧ್ಯಕ್ಷತೆಗೆ ಸಿಕ್ಕಿದ ಮಹತ್ವದ ವಿಜಯವಾಗಿದೆ.

ಉಕ್ರೇನ್ ಸಂಘರ್ಷವನ್ನು ವಿವರಿಸಲು ಭಾರತವು ಜಿ-20 ದೇಶಗಳಿಗೆ ಹೊಸ ಬರಹವನ್ನು ಸಲ್ಲಿಸಿದ ಗಂಟೆಗಳ ಬಳಿಕ, ಘೋಷಣೆಗೆ ಒಮ್ಮತ ಸಿಕ್ಕಿದೆ ಹಾಗೂ ಅದನ್ನು ಅಂಗೀಕರಿಸಲಾಗಿದೆ ಎನ್ನುವ ಘೋಷಣೆಯನ್ನು ಮೋದಿ ಮಾಡಿದರು.

‘‘ಸ್ನೇಹಿತರೇ, ಈಗಷ್ಟೇ ನಮಗೆ ಶುಭ ಸುದ್ದಿ ಸಿಕ್ಕಿದೆ. ನಮ್ಮ ತಂಡಗಳ ಕಠಿಣ ಪರಿಶ್ರಮ ಮತ್ತು ನಿಮ್ಮೆಲ್ಲರ ಸಹಕಾರದಿಂದ ‘ಹೊಸದಿಲ್ಲಿ ಜಿ-20 ಶೃಂಗ ಸಮ್ಮೇಳನ ನಾಯಕರ ಘೋಷಣೆ’ಗೆ ಒಮ್ಮತ ಲಭಿಸಿದೆ’’ ಎಂದು ಶೃಂಗ ಸಮ್ಮೇಳನದಲ್ಲಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.

‘‘ಈ ಘೋಷಣೆಯನ್ನು ಅಂಗೀಕರಿಸಲಾಗಿದೆ ಎಂದು ನಾನು ಘೋಷಿಸುತ್ತೇನೆ’’ ಎಂದು ಅವರು ಘೋಷಿಸಿದರು. ಅಂಗೀಕಾರವಾಗಿದೆ ಎನ್ನುವುದರ ಸಂಕೇತವಾಗಿ ಮೂರು ಬಾರಿ ಮರದ ಸುತ್ತಿಗೆಯಿಂದ ಬಡಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ಬ್ರಿಟನ್ ಪ್ರಧಾನಿ ರಿಶಿ ಸುನಾಕ್ ಮತ್ತು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲೂಲ ಡಿ ಸಿಲ್ವ ಸೇರಿದಂತೆ ಹಲವು ನಾಯಕರು ಶೃಂಗ ಸಮ್ಮೇಳನದಲಿ ಭಾಗವಹಿಸಿದ್ದಾರೆ. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಮ್ಮೇಳನದಿಂದ ಹಿಂದೆ ಸರಿದಿದ್ದಾರೆ.

ಪ್ರಧಾನಿ ಮೋದಿ ಜಿ20 ಶೃಂಗ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

‘‘ಈ ಸಂದರ್ಭದಲ್ಲಿ, ಇದನ್ನು ಸಾಧ್ಯವಾಗಿಸಲು ಕಠಿಣ ಪರಿಶ್ರಮ ಪಟ್ಟ ಸಚಿವರು, ಶೆರ್ಪಾಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ನಾನು ಹೃದಯದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ; ಅವರು ಪ್ರಶಂಸೆಗೆ ಅರ್ಹರು’’ ಎಂದು ಮೋದಿ ನುಡಿದರು.

ಈ ಯಶಸ್ಸಿನ ಬಗ್ಗೆ ‘ಎಕ್ಸ್’ನಲ್ಲಿ ಸಂಭ್ರಮವನ್ನು ಹಂಚಿಕೊಂಡಿರುವ ಭಾರತದ ಜಿ-20 ಶೆರ್ಪಾ ಅಮಿತಾಭ್ ಕಾಂತ್, ‘‘ಎಲ್ಲಾ ಜಾಗತಿಕ-ರಾಜಕೀಯ ವಿಷಯಗಳಲ್ಲಿ 100 ಶೇಕಡ ಒಮ್ಮತದ ಐತಿಹಾಸಿಕ ಜಿ20 ಘೋಷಣೆ. ಭೂ ಗ್ರಹ, ಜನರು, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಭಾವಶಾಲಿ ಕರೆಯನ್ನು ನೀಡುವ ಬರಹ. ಇಂದಿನ ಜಗತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವವನ್ನು ಇದು ನಿರೂಪಿಸುತ್ತದೆ’’ ಎಂದು ಬರೆದಿದ್ದಾರೆ.

ಉಕ್ರೇನ್ ಕುರಿತ ಬರಹದಲ್ಲಿ ಬದಲಾವಣೆ

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಭಾರತವು ಶನಿವಾರ ಬೆಳಗ್ಗೆ ಪೂರೈಸಿದ ಹೊಸ ಬರಹಕ್ಕೆ ಜಿ-20 ದೇಶಗಳು ಒಮ್ಮತ ವ್ಯಕ್ತಪಡಿಸಿದವು ಎಂದು ತಿಳಿದುಬಂದಿದೆ.

ಹರ್ಯಾಣದ ನೂಹ್ ಜಿಲ್ಲೆಯಲ್ಲಿ ಸೆಪ್ಟಂಬರ್3ರಿಂದ 6ರವರೆಗೆ ನಡೆದ ಜಿ-20 ಶೆರ್ಪಾ ಸಭೆಯಲ್ಲಿ, ಉಕ್ರೇನ್ ಸಂಘರ್ಷವನ್ನು ವಿವರಿಸಲು ಬಳಸಲಾಗಿದ್ದ ಬರಹಕ್ಕೆ ಒಮ್ಮತ ಸಿಕ್ಕಿರಲಿಲ್ಲ.

ಒಮ್ಮತದ ತತ್ವದಡಿಯಲ್ಲಿ ಜಿ-20 ಕೆಲಸ ಮಾಡುತ್ತದೆ.

ಉಕ್ರೇನ್ ಸಂಘರ್ಷದ ಬಗ್ಗೆ ಬಾಲಿ ಘೋಷಣೆಯಲ್ಲಿದ್ದ ಎರಡು ಪ್ಯಾರಾಗ್ರಾಫ್ ಬರಹಕ್ಕೆ ರಶ್ಯ ಮತ್ತು ಚೀನಾಗಳೆರಡೂ ಒಪ್ಪಿಗೆ ಸೂಚಿಸಿದ್ದವು. ಆದರೆ, ಈ ವರ್ಷ ಆ ಎರಡೂ ದೇಶಗಳು ತಮ್ಮ ನಿಲುವಿನಿಂದ ಹಿಂದೆ ಸರಿದವು. ಇದು ಭಾರತಕ್ಕೆ ಸಮಸ್ಯೆಯನ್ನು ಸೃಷ್ಟಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News