ಜಿ20ಗೆ ಆಫ್ರಿಕ ಒಕ್ಕೂಟ ಸೇರ್ಪಡೆ

Update: 2023-09-09 17:45 GMT

Photo- PTI

ಹೊಸದಿಲ್ಲಿ: ಜಿ20 ರಾಷ್ಟ್ರಗಳ ಒಕ್ಕೂಟಕ್ಕೆ ಖಾಯಂ ಸದಸ್ಯನಾಗಿ ಆಫ್ರಿಕ ಒಕ್ಕೂಟವು ಶನಿವಾರ ಸೇರ್ಪಡೆಗೊಂಡಿದೆ. ಹೊಸದಿಲ್ಲಿಯಲ್ಲಿ ಭಾರತ ಮಂಡಪಂನಲ್ಲಿ ನಡೆದ ಜಿ20 ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿಯವರು ಜಿ20 ಬಳಗಕ್ಕೆ 55 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಆಫ್ರಿಕ ಒಕ್ಕೂಟದ ಸೇರ್ಪಡೆಯನ್ನು ಪ್ರಕಟಿಸಿದರು.

‘‘ಎಲ್ಲರೊಂದಿಗೂ ಮುನ್ನಡೆಯುವ ಭಾವನೆಯೊಂದಿಗೆ ಜಿ20ಯಲ್ಲಿ ಆಫ್ರಿಕ ಒಕ್ಕೂಟಕ್ಕೆ ಖಾಯಂ ಸದಸ್ಯತ್ವವನ್ನು ನೀಡಬೇಕೆಂಬ ಪ್ರಸ್ತಾವವನ್ನು ಭಾರತ ಮುಂದಿಟ್ಟಿತ್ತು. ಈ ಪ್ರಸ್ತಾವನೆಗೆ ನಮ್ಮೆಲ್ಲರ ಸಹಮತವಿದೆಯೆಂದು ನಾನು ನಂಬುತ್ತೇನೆ. ನಿಮ್ಮ ಸಮ್ಮತಿಯೊಂದಿಗೆ ನಾನು ಈ ಘೋಷಣೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ ಮೋದಿ , ಸಣ್ಣ ಸುತ್ತಿಗೆಯನ್ನು ಮೂರು ಬಾರಿ ಮೇಜಿಗೆ ಬಡಿದರು.

“ನಾವು ಕಲಾಪವನ್ನು ಆರಂಭಿಸುವ ಮುನ್ನ, ಆಫ್ರಿಕ ಒಕ್ಕೂಟದ ಅಧ್ಯಕ್ಷರು ಜಿ20 ಸದಸ್ಯರಾಗಿ ತಮ್ಮ ಸ್ಥಾನವನ್ನು ಆಲಂಕರಿಸಬೇಕೆಂದು ಕೋರುತ್ತೇನೆ’’ ಎಂದು ಮೋದಿ ಹೇಳಿದರು.

ಮೋದಿ ಅವರು ಈ ಘೋಷಣೆಯನ್ನು ಮಾಡಿದ ಬಳಿಕ ಆಫ್ರಿಕ ಒಕ್ಕೂಟದ ಅಧ್ಯಕ್ಷರಾದ ಯೂನಿಯನ್ ಆಫ್ ಕೊಮೊರೊಸ್ ದೇಶದ ಅಧ್ಯಕ್ಷ ಅಝಾಲಿ ಅಸೌಮಾನಿ ಅವರು ಜಿ20 ಪೂರ್ಣಮಟ್ಟದ ಸದಸ್ಯನಾಗಿ ಆಸನವನ್ನು ಆಲಂಕರಿಸಿದರು.

ಜಿ20ಯಲ್ಲಿ ಆಫ್ರಿಕ ಒಕ್ಕೂಟದ ಸದಸ್ಯತ್ವ ನೀಡುವ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮುಂಚೂಣಿಯ ಪಾತ್ರ ವಹಿಸಿದ್ದರು. ಕಳೆದ ಜೂನ್ ನಲ್ಲಿ ಮೋದಿ ಅವರು ಜಿ20 ನಾಯಕರಿಗೆ ಪತ್ರ ಬರೆದು, ಹೊಸದಿಲ್ಲಿಯಲ್ಲಿ ನಡೆಯುವ ಶೃಂಗಸಭೆಯಲ್ಲಿ ಆಫ್ರಿಕ ಒಕ್ಕೂಟಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿದ್ದರು.

ಈ ತಿಂಗಳಲ್ಲಿ ಪ್ರಧಾನಿ ಮೋದಿಯವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭಾರತಕ್ಕೆ ಆಫ್ರಿಕವು ಆದ್ಯತೆಯ ವಿಷಯವಾಗಿದೆ ಎಂದು ಹೇಳಿದ್ದರು. ತಮ್ಮ ಧ್ವನಿಗಳು ಕೇಳುತ್ತಿಲ್ಲವೆಂದು ಭಾವಿಸುತ್ತಿರುವವರನ್ನು ಜಾಗತಿಕ ವ್ಯವಹಾರಗಳಲ್ಲಿ ಒಳಪಡಿಸಲು ಭಾರತವು ಶ್ರಮಿಸುತ್ತದೆ ಎಂದವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News