350 ವರ್ಷಗಳ ಬಳಿಕ ಛತ್ರಪತಿ ಶಿವಾಜಿಯ ‘ವ್ಯಾಘ್ರ ನಖ’ ಆಯುಧ ಮರಳಿ ಭಾರತಕ್ಕೆ

Update: 2023-10-01 17:21 GMT

Photo: ANI

ಮುಂಬೈ : 1659ರಲ್ಲಿ ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡಾಧಿಕಾರಿ ಅಫ್ಝಲ್ ಖಾನ್ ನನ್ನು ಸೋಲಿಸಲು ಚತ್ರಪತಿ ಶಿವಾಜಿ ಮಹಾರಾಜ ಬಳಸಿದ್ದಾರೆ ಎನ್ನಲಾದ ‘ವ್ಯಾಘ್ರ ನಖ’ (ಹುಲಿಯ ಉಗುರಿನ ಮಾದರಿಯ ಆಯುಧ) ಆಯುಧವನ್ನು ಬರೋಬ್ಬರಿ 350 ವರ್ಷಗಳ ಬಳಿಕ ನವೆಂಬರ್ ನಲ್ಲಿ ಲಂಡನ್ನಿಂದ ಮಹಾರಾಷ್ಟ್ರಕ್ಕೆ ತರಲಾಗುತ್ತಿದೆ.

ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಈ ‘ವ್ಯಾಘ್ರ ನಖ’ ಆಯುಧವನ್ನು ಲಂಡನ್ ನ ವಿಕ್ಟೋರಿಯಾ ಹಾಗೂ ಅಲ್ಬರ್ಟ್ ವಸ್ತು ಸಂಗ್ರಹಾಲಯದಿಂದ ಹಿಂದೆ ತರಲಾಗುತ್ತಿದೆ.

ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಮಂಗಳವಾರ ಲಂಡನ್ ತಲುಪಲಿದ್ದು, ‘ವ್ಯಾಘ್ರ ನಖ’ ಆಯುಧವನ್ನು ಹಿಂದೆ ತರಲು ವಸ್ತುಸಂಗ್ರಹಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

‘‘ಮೊದಲ ಹಂತದಲ್ಲಿ ನಾವು ವ್ಯಾಘ್ರ ನಖ ಆಯುಧವನ್ನು ಹಿಂದೆ ತರಲಿದ್ದೇವೆ. ಅದನ್ನು ನವೆಂಬರ್ ನಲ್ಲಿ ಇಲ್ಲಿಗೆ ತರಲಾಗುವುದು. ಅದಕ್ಕಾಗಿ ನಾವು ಪರಸ್ಪರ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಿದ್ದೇವೆ’’ ಎಂದು ಮುಂಗಂತಿವಾರ್ ತಿಳಿಸಿದ್ದಾರೆ.

ಈ ‘ವ್ಯಾಘ್ರ ನಖ’ ಆಯುಧವನ್ನು ದಕ್ಷಿಣ ಮುಂಬೈಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ವಸ್ತು ಸಂಗ್ರಹಾಲಯದಲ್ಲಿ ಇರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ‘ವ್ಯಾಘ್ರ ನಖ’ ಆಯುಧದ ಅಸಲಿಯತ್ತಿನ ಕುರಿತು ಮಹಾರಾಷ್ಟ್ರದಲ್ಲಿ ವಾಗ್ವಾದ ನಡೆಯುತ್ತಿದೆ. ವಿಕ್ಟೋರಿಯಾ ಮತ್ತು ಅಲ್ಪರ್ಟ್ ವಸ್ತು ಸಂಗ್ರಹಾಲಯದ ವೆಬ್ಸೈಟ್ ಛತ್ರಪತಿ ಶಿವಾಜಿ ಈ ಆಯುಧವನ್ನು ಬಳಸಿಲ್ಲ ಎಂದು ಹೇಳುತ್ತದೆ ಎಂದು ಇತಿಹಾಸ ತಜ್ಞ ಇಂದ್ರಜಿತ್ ಸಾವಂತ್ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಶಿವಸೇನೆ (ಯುಟಿಬಿ) ನಾಯಕ ಆದಿತ್ಯ ಠಾಕ್ರೆ ಕೂಡ ‘ವ್ಯಾಘ ನಖ’ ಆಯುಧದ ಅಸಲಿಯತ್ತನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಇದು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಚುನಾವಣಾ ತಂತ್ರ ಎಂದು ಕಿಡಿ ಕಾರಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News