ಸಂಸದೀಯ ಸ್ಥಾಯಿ ಸಮಿತಿಗಳು | ನಾಲ್ಕು ಸಮಿತಿಗಳ ನೇತೃತ್ವ ವಹಿಸಲಿರುವ ಕಾಂಗ್ರೆಸ್

Update: 2024-09-16 16:15 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಸಂಸದೀಯ ಸ್ಥಾಯಿ ಸಮಿತಿ ನೇತೃತ್ವದ ಕುರಿತ ರಾಜಿ ಸಂಧಾನವನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ವಿದೇಶಾಂಗ ವ್ಯವಹಾರಗಳು ಸೇರಿದಂತೆ ನಾಲ್ಕು ಪ್ರಮುಖ ಸಮಿತಿಗಳ ನೇತೃತ್ವ ವಹಿಸಲಿದೆ. ಆದರೆ, ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯ ನೇತೃತ್ವಕ್ಕೆ ಕಾಂಗ್ರೆಸ್ ಇಟ್ಟಿದ್ದ ಬೇಡಿಕೆಗೆ ಮನ್ನಣೆ ದೊರೆತಿಲ್ಲ.

ಕಾಂಗ್ರೆಸ್ ಸಂಸದರು ಲೋಕಸಭೆ ನಿರ್ವಹಿಸುವ ವಿದೇಶಾಂಗ ವ್ಯವಹಾರಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ರಾಜ್ಯಸಭೆ ಅಡಿ ಬರುವ ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡೆ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿಗಳ ನೇತೃತ್ವ ವಹಿಸಲಿದೆ ಎಂದು ವರದಿಯಾಗಿದೆ.

ಹಿಂದಿನ ಲೋಕಸಭಾ ಅವಧಿಯಲ್ಲಿ ಕಾಂಗ್ರೆಸ್ ಎರಡು ಸ್ಥಾಯಿ ಸಮಿತಿಗಳ ನೇತೃತ್ವ ವಹಿಸಿತ್ತು. ಆ ಪೈಕಿ ಎರಡು ರಾಜ್ಯಸಭೆ ಮತ್ತೊಂದು ಲೋಕಸಭೆಯದ್ದಾಗಿತ್ತು. ಜೈರಾಮ್ ರಮೇಶ್ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸ್ಥಾಯಿ ಸಮಿತಿಯ ನೇತೃತ್ವ ವಹಿಸಿದ್ದರೆ, ಅಭಿಷೇಕ್ ಸಿಂಘ್ವಿ ವಾಣಿಜ್ಯ ಸ್ಥಾಯಿ ಸಮಿತಿಯ ನೇತೃತ್ವ ವಹಿಸಿದ್ದರು. ಈ ಎರಡೂ ಸಮಿತಿಗಳು ರಾಜ್ಯಸಭೆಯಡಿ ಬರುತ್ತವೆ. ಲೋಕಸಭೆಯಡಿ ಬರುವ ರಾಸಾಯನಿಕ ಮತ್ತು ರಸಗೊಬ್ಬರಗಳು ಸ್ಥಾಯಿ ಸಮಿತಿಯ ನೇತೃತ್ವವನ್ನು ಶಶಿ ತರೂರ್ ವಹಿಸಿದ್ದರು.

ಐದು ವರ್ಷಗಳ ನಂತರ ಕಾಂಗ್ರೆಸ್ ಪಕ್ಷವು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ನೇತೃತ್ವ ವಹಿಸುತ್ತಿದೆ. ಆಗ ಶಶಿ ತರೂರ್ ಈ ಸಮಿತಿಯ ನೇತೃತ್ವ ವಹಿಸಿದ್ದರು.

ಸರಕಾರದೊಂದಿಗಿನ ಸಂಧಾನದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆಯ ಮುಖ್ಯ ಸ್ಥಾಯಿ ಸಮಿತಿಗಳಾದ ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಪೈಕಿ ಕನಿಷ್ಠ ಪಕ್ಷ ಒಂದು ಸಮಿತಿಯ ನೇತೃತ್ವಕ್ಕೆ ಪಟ್ಟು ಹಿಡಿದಿತ್ತು. ಅಲ್ಲದೆ, ಸಾಮಾಜಿಕ ನ್ಯಾಯ ಮತ್ತು ಕೃಷಿ ಸ್ಥಾಯಿ ಸಮಿತಿಯ ನೇತೃತ್ವಕ್ಕೂ ಒತ್ತಡ ಹೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News