ಬಿಜೆಪಿ ,ಶಿವಸೇನಾ ನಾಯಕರಿಂದ ಜೀವಬೆದರಿಕೆ | ರಾಹುಲ್ ಸುರಕ್ಷತೆ ಬಗ್ಗೆ ಸ್ಟಾಲಿನ್ ಕಳವಳ
ಚೆನ್ನೈ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಹಾಗೂ ಶಿವಸೇನಾ ನಾಯಕರು ಜೀವಬೆದರಿಕೆಯೊಡ್ಡಿರುವ ಕುರಿತ ಮಾಧ್ಯಮ ವರದಿಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ, ಎಂ.ಕೆ.ಸ್ಟಾಲಿನ್ ಬುಧವಾರ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ರಾಹುಲ್ ಅವರ ಸುರಕ್ಷತೆಯನ್ನು ಖಾತರಿಪಡಿಸಲು ಕ್ಷಿಪ್ರವಾಗಿ ಕಾರ್ಯಾಚರಿಸುವಂತೆ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
‘‘ತನ್ನ ಅಜ್ಜಿಗೆ ಆದ ಗತಿಯನ್ನೇ ರಾಹುಲ್ ಕಾಣಲಿದ್ದಾರೆ ಎಂಬ ಬಿಜೆಪಿ ನಾಯಕನ ಎಚ್ಚರಿಕೆ ನೀಡಿರುವುದು ಹಾಗೂ ಅವರ ನಾಲಗೆಯನ್ನು ಕತ್ತರಿಸಿ ಹಾಕಿದಲ್ಲಿ ಬಹುಮಾನ ನೀಡುವುದಾಗಿ ಶಿವಸೇನಾ ನಾಯಕ ಘೋಷಿಸಿರುವುದು ಸೇರಿದಂತೆ ಅವರಿಗೆ ಹಲವು ಬೆದರಿಕೆಗಳನ್ನು ಒಡ್ಡಿರುವ ಕುರಿತಾದ ಮಾಧ್ಯಮ ವರದಿಗಳು ತೀವ್ರ ಆಘಾತಕಾರಿಯಾಗಿವೆ. ನನ್ನ ‘ಸೋದರ’ ರಾಹುಲ್ ಗಾಂಧಿ ಅವರಿಗೆ ವರ್ಚಸ್ಸು ಹಾಗೂ ಜನ ಬೆಂಬಲ ಹೆಚ್ಚುತ್ತಿರುವುದು, ಹಲವರನ್ನು ವಿಚಲಿತಗೊಳಿಸಿದೆ. ಹೀಗಾಗಿ ಇಂತಹ ಬೆದರಿಕೆಗಳನ್ನು ಒಡ್ಡುವಂತಹ ಹೇಯ ಕೃತ್ಯಕ್ಕೆ ಅವರು ಇಳಿದಿದ್ದಾರೆ. ಕೇಂದ್ರ ಸರಕಾರವು ಲೋಕಸಭೆಯ ಪ್ರತಿಪಕ್ಷ ನಾಯಕನ ಸುರಕ್ಷತೆಗೆ ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ ಹಾಗೂ ಪ್ರಜಾಪ್ರಭುತ್ವದಲ್ಲಿ ಬೆದರಿಕೆ ಮತ್ತು ಹಿಂಸಾಚಾರಕ್ಕೆ ಜಾಗವಿಲ್ಲವೆಂಬುದನ್ನು ದೃಢಪಡಿಸಬೇಕಾಗಿದೆ’’ ಎಂದು ಡಿಎಂಕೆ ಅಧ್ಯಕ್ಷರೂ ಆದ ಸ್ಟಾಲಿನ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.