‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತುತ ಸಂವಿಧಾನದಡಿ ಸಾಧ್ಯವಿಲ್ಲ : ಪಿ.ಚಿದಂಬರಂ

Update: 2024-09-16 15:18 GMT

ಪಿ.ಚಿದಂಬರಂ | PTI  

ಚಂಡಿಗಡ : ‘ಒಂದು ದೇಶ,ಒಂದು ಚುನಾವಣೆ’ ಕುರಿತು ಸೋಮವಾರ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು,ಪ್ರಸ್ತುತ ಸಂವಿಧಾನದಡಿ ಇದು ಸಾಧ್ಯವಿಲ್ಲ,ಇದಕ್ಕೆ ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳು ಅಗತ್ಯವಾಗುತ್ತವೆ ಎಂದು ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸರಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲಿ ‘ಒಂದು ದೇಶ,ಒಂದು ಚುನಾವಣೆ’ಯನ್ನು ಜಾರಿಗೊಳಿಸಲಿದೆ ಎಂಬ ವರದಿಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಚಿದಂಬರಂ,ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಈ ಸಾಂವಿಧಾನಿಕ ತಿದ್ದುಪಡಿಗಳನ್ನು ಮಂಡಿಸಲು ಅಗತ್ಯ ಸಂಖ್ಯಾಬಲ ಪ್ರಧಾನಿ ನರೇಂದ್ರ ಮೋದಿಯವರ ಬಳಿಯಲ್ಲಿ ಇಲ್ಲ ಎಂದು ಹೇಳಿದರು.

ಕಳೆದ ತಿಂಗಳು ತನ್ನ ಸ್ವಾತಂತ್ರ್ಯ ದಿನ ಭಾಷಣದಲ್ಲಿ ‘ಒಂದು ದೇಶ,ಒಂದು ಚುನಾವಣೆ’ಯನ್ನು ಬಲವಾಗಿ ಪ್ರತಿಪಾದಿಸಿದ್ದ ಮೋದಿ, ಆಗಾಗ್ಗೆ ನಡೆಯುವ ಚುನಾವಣೆಗಳು ದೇಶದ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ವಾದಿಸಿದ್ದರು.

“ಒಂದು ದೇಶ, ಒಂದು ಚುನಾವಣೆ’ಗೆ ಹೆಚ್ಚಿನ ಸಾಂವಿಧಾನಿಕ ಅಡೆತಡೆಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದ ಚಿದಂಬಂರಂ, ಅದು ಸಾಧ್ಯವಿಲ್ಲ.ಇಂಡಿಯಾ ಮೈತ್ರಿಕೂಟವು ಅದನ್ನು ಬಲವಾಗಿ ವಿರೋಧಿಸುತ್ತದೆ” ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕಾಂಗ್ರೆಸ್ ಮೀಸಲಾತಿಯನ್ನು ಅಂತ್ಯಗೊಳಿಸಲು ಬಯಸುತ್ತಿದೆ ಎಂಬ ಮೋದಿಯವರ ಇತ್ತೀಚಿನ ಆರೋಪವನ್ನು ತಿರಸ್ಕರಿಸಿದ ಚಿದಂಬರಂ,‘ ನಾವೇಕೆ ಮೀಸಲಾತಿಯನ್ನು ರದ್ದುಗೊಳಿಸಬೇಕು? ಶೇ.50ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕುವಂತೆ ಕೇಳುತ್ತಿರುವವರು ನಾವು. ಜಾತಿ ಗಣತಿಗಾಗಿ ಕೇಳುತ್ತಿರುವವರು ನಾವು. ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ನಾವು ಹೇಳುತ್ತಿದ್ದೇವೆ. ಪ್ರಧಾನಿಯವರು ಹೇಳುವುದೆಲ್ಲವನ್ನೂ ನಂಬಬೇಡಿ’ ಎಂದು ಸುದ್ದಿಗಾರರಿಗೆ ಕಿವಿಮಾತು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News