ಕೇರಳದಲ್ಲಿ ನಿಫಾ ಸೋಂಕಿನಿಂದ ವಿದ್ಯಾರ್ಥಿ ಸಾವು | ರಾಜ್ಯದಲ್ಲಿ ನಿಗಾ ಹೆಚ್ಚಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು
ಬೆಂಗಳೂರು : ಇತ್ತೀಚೆಗೆ ಕೇರಳದಲ್ಲಿ ಮೃತಪಟ್ಟ ಬೆಂಗಳೂರಿನ ವಿದ್ಯಾರ್ಥಿಗೆ ನಿಫಾ ಸೋಂಕು ದೃಢಪಟ್ಟ ಬಳಿಕ ರಾಜ್ಯ ಸರಕಾರದ ಆರೋಗ್ಯ ಇಲಾಖೆ ತನ್ನ ನಿಗಾ ಪ್ರಯತ್ನವನ್ನು ಹೆಚ್ಚಿಸಿದೆ.
ಮೃತಪಟ್ಟ 24 ವರ್ಷದ ಯುವಕ ಬೆಂಗಳೂರಿನ ಹೊರವಲಯದ ಸೋಲದೇವನಹಳ್ಳಿಯಲ್ಲಿರುವ ಸಂಸ್ಥೆಯೊಂದರ ಮನಃಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ. ಈತ ಮಲಪ್ಪುರಂನ ತಿರುವಾಲಿ ಪಂಚಾಯತ್‌ನ ನಿವಾಸಿ.
ಆರೋಗ್ಯ ಇಲಾಖೆಯ ರೋಗ ನಿಗಾ ಘಟಕದ ತಂಡ ಈ ಸಂಸ್ಥೆಗೆ ಭೇಟಿ ನೀಡಿದೆ. ಅಲ್ಲದೆ, ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ 32 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಪರಿಶೀಲನೆಗೆ ಒಳಪಡಿಸಿದೆ. ಯುವಕ ಆಸ್ಪತ್ರೆಯಲ್ಲಿ ಇದ್ದಾಗೆ ಮೂವರು ವಿದ್ಯಾರ್ಥಿಗಳು ಆತನನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ಹಾಗೂ ಮಾಧ್ಯಮಿಕ ಸಂಪರ್ಕವನ್ನು ನಿರಂತರ ಅನುಸರಿಸುವಂತೆ ಚಿಕ್ಕ ಬಾಣಾವರ ಹಾಗೂ ಗೋಪಾಲಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘‘ತಂಡ ಸಂಸ್ಥೆಯಲ್ಲಿ ಸಂಪರ್ಕವನ್ನು ಪತ್ತೆ ಹಚ್ಚುತ್ತಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಬೆಂಗಳೂರಿನವರು. ಅವರಲ್ಲಿ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಿಲ್ಲ’’ ಎಂದು ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ನಿಗಾ ಕಾರ್ಯಕ್ರಮ (ಐಡಿಎಸ್‌ಪಿ)ದ ಯೋಜನಾ ನಿರ್ದೇಶಕ ಡಾ. ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ. ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
‘‘ನಿಫಾ ವೈರಸ್ ಬಗ್ಗೆ ನಮಗೆ ಆತಂಕ ಇದೆ. ಆದರೆ, ಜನರು ಆತಂಕಗೊಳ್ಳುವ ಅಗತ್ಯತೆ ಇಲ್ಲ. ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಕೇರಳದಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಯಾರಲ್ಲಿ ಕೂಡ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ’’ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.