ರೂ. 1,800 ಕೋಟಿ ತೆರಿಗೆ ನೋಟಿಸ್ ಪಡೆದ ಬೆನ್ನಲ್ಲೇ ಕಾಂಗ್ರೆಸ್ ಗೆ ಐಟಿ ಇಲಾಖೆಯಿಂದ ಮತ್ತೆರಡು ನೋಟಿಸ್
ಹೊಸದಿಲ್ಲಿ: ರೂ. 1,800 ಕೋಟಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ ಮರುದಿನ, “ಕಳೆದ ರಾತ್ರಿ ನಾವು ಮತ್ತೆರಡು ನೋಟಿಸ್ ಸ್ವೀಕರಿಸಿದ್ದೇವೆ” ಎಂದು ಶನಿವಾರ ಕಾಂಗ್ರೆಸ್ ಹೇಳಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ನಾವು ಮತ್ತೆ ಎರಡು ನೋಟಿಸ್ ಗಳನ್ನು ಕಳೆದ ರಾತ್ರಿ ಸ್ವೀಕರಿಸಿದ್ದೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಕಾಂಗ್ರೆಸ್ ತೆರಿಗೆ ಭಯೋತ್ಪಾದನೆಗೆ ಗುರಿಯಾಗಿದೆ ಎಂದು ಅವರು ಪುನರುಚ್ಚರಿಸಿದರು.
“ವಿರೋಧ ಪಕ್ಷಗಳನ್ನು ಕುಂಠಿತಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಬಯಕೆಯಾಗಿದೆ” ಎಂದು ಅವರು ಆರೋಪಿಸಿದರು.
ಇದೇ ವೇಳೆ, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ನಾನು ಆದಾಯ ತೆರಿಗೆ ಇಲಾಖೆಯ ನೋಟಿಸ್ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ನಾನು ಕಳೆದ ರಾತ್ರಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ್ದೇನೆ. ಅದನ್ನು ಕಂಡು ನಾನು ಆಘಾತಕ್ಕೀಡಾದೆ. ಈ ವಿಷಯವು ಅದಾಗಲೇ ಮುಕ್ತಾಯಗೊಂಡಿದೆ. ಅವರು (ಬಿಜೆಪಿ) ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಬಗ್ಗೆ ಭಯಗೊಂಡಿದ್ದಾರೆ” ಎಂದು ಲೇವಡಿ ಮಾಡಿದರು.