ಜಮ್ಮು ಮತ್ತು ಕಾಶ್ಮೀರ | 370ನೇ ವಿಧಿ ನಿರ್ಣಯದ ವಿರೋಧಿಸಿ ಸತತ ಮೂರನೆಯ ದಿನವೂ ಕಲಾಪಕ್ಕೆ ಅಡ್ಡಿ, ಪ್ರತಿಭಟನೆ
ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಮರುಸ್ಥಾಪಿಸಬೇಕು ಎಂದು ಕೈಗೊಂಡಿರುವ ನಿರ್ಣಯದ ವಿರುದ್ಧ ಸತತ ಮೂರನೆಯ ದಿನವೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕಲಾಪಕ್ಕೆ ಅಡ್ಡಿಪಡಿಸಲಾಯಿತು. ಇಂದಿನ ಕಲಾಪ ಪರಸ್ಪರ ಘೋಷಣೆ, ದೈಹಿಕ ಘರ್ಷಣೆ ಹಾಗೂ ಬಿಜೆಪಿ ಶಾಸಕರ ಸಭಾತ್ಯಾಗಕ್ಕೆ ಸಾಕ್ಷಿಯಾಯಿತು. ಇದಕ್ಕೂ ಮುನ್ನ, ಬಿಜೆಪಿಯ ಹಲವಾರು ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು. ನಂತರ ಅವರನ್ನೆಲ್ಲ ಸದನದಿಂದ ಹೊರದೂಡಲಾಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಸರಕಾರವು ಬುಧವಾರ ನೂತನ ನಿರ್ಣಯ ಕೈಗೊಂಡ ನಂತರ, ಈ ಸಂಘರ್ಷ ಪ್ರಾರಂಭಗೊಂಡಿದೆ. ಈ ನಿರ್ಣಯವನ್ನು ಕಾನೂನುಬಾಹಿರ ಎಂದು ಹೇಳಿರುವ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ನಿರ್ಣಯವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದೆ. ಆದರೆ, ಈ ಆಗ್ರಹವನ್ನು ತಳ್ಳಿ ಹಾಕಿದ ಸ್ಪೀಕರ್ ಅಬ್ದುಲ್ ರಹೀಂ, ಯಾವುದೇ ನಿರ್ಣಯವನ್ನು ಹಿಂಪಡೆಯುವ ಅಧಿಕಾರ ಸದನಕ್ಕಿದೆಯೆ ಹೊರತು ಸ್ಪೀಕರ್ ಗಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭಾ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮ ಭಾಷಣ ಮಾಡುವಾಗ, ಭಿತ್ತಿ ಫಲಕ ಹಿಡಿದುಕೊಂಡು ಬಾವಿಗೆ ಧಾವಿಸಿದ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಶೇಖ್ ಖುರ್ಶೀದ್, 370ನೇ ವಿಧಿ ಹಾಗೂ 35ಎ ವಿಧಿಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಆಗ ಕ್ಷಿಪ್ರವಾಗಿ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕರು, ಭಿತ್ತಿ ಫಲಕವನ್ನು ಕಸಿದುಕೊಂಡು, ಹರಿದು ಹಾಕಿದರು. ಇದರಿಂದ ಕೆಲ ಕಾಲ ಘರ್ಷಣೆಯುಂಟಾಗಿ, ಖುರ್ಶೀದ್ ಬೆಂಬಲಕ್ಕೆ ಪೀಪಲ್ಸ್ ಕಾನ್ಫರೆನ್ಸ್ ಶಾಸಕ ಸಜ್ಜದ್ ಲೋನೆ ನಿಂತರು. ಇದರಿಂದಾಗಿ 15 ನಿಮಿಷಗಳ ಕಾಲ ವಿಧಾನಸಭಾ ಕಲಾಪವನ್ನು ಮುಂದೂಡಲಾಯಿತು.
ಕಲಾಪ ಮರು ಪ್ರಾರಂಭಗೊಂಡಾಗ, ಸದನದಲ್ಲಿ ಶಿಸ್ತು ಕಾಯ್ದುಕೊಳ್ಳುವಂತೆ ಸ್ಪೀಕರ್ ಮನವಿ ಮಾಡಿದರೂ, ಬಿಜೆಪಿ ಶಾಸಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಆದರೆ, ಭಾರತೀಯ ಜನಸಂಘ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರನ್ನು ಪ್ರಶಂಸಿಸುವ ಘೋಷಣೆಗಳನ್ನು ಕೂಗುವುದನ್ನು ಬಿಜೆಪಿ ಶಾಸಕರು ಮುಂದುವರಿಸಿದಾಗ, “ನನಗೆ ಕ್ರಮ ಕೈಗೊಳ್ಳುವಂತಹ ಒತ್ತಡ ಸೃಷ್ಟಿಸಬೇಡಿ ಹಾಗೂ ನಾನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ” ಎಂದು ಸ್ಪೀಕರ್ ಎಚ್ಚರಿಸಿದರು. ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಗಾಗಿ ಆಗಿರುವ ಐತಿಹಾಸಿಕ ಬಲಿದಾನಗಳ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದರಿಂದ, ಪ್ರತಿಭಟನಾನಿರತರಾಗಿದ್ದ ಹಲವು ಬಿಜೆಪಿ ಶಾಸಕರನ್ನು ಸದನದಿಂದ ಹೊರಹಾಕುವಂತೆ ಸ್ಪೀಕರ್ ಆದೇಶಿಸಿದರು. ಆಗ, ಬಿಜೆಪಿ ಶಾಸಕರನ್ನು ಸದನದಿಂದ ಹೊರಹಾಕಲು ಬಂದ ಮಾರ್ಷಲ್ ಗಳೊಂದಿಗೆ ದೈಹಿಕ ಘರ್ಷಣೆ ನಡೆಯಿತು.
#WATCH | Srinagar | By orders of the J&K Assembly Speaker Abdul Rahim Rather, BJP MLAs entering the well of the House marshalled out pic.twitter.com/yHbRS1VEsw
— ANI (@ANI) November 8, 2024