ಗುಜರಾತ್: ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಮತ್ತೋರ್ವ ಬಿಜೆಪಿ ಅಭ್ಯರ್ಥಿ
ಅಹಮದಾಬಾದ್: ಮೂರು ಬಾರಿ ವಡೋದರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಗೂ ಹಾಲಿ ಸಂಸದರಾದ ಬಿಜೆಪಿ ಅಭ್ಯರ್ಥಿ ರಂಜನ್ ಬೆನ್ ಭಟ್ ಸ್ಪರ್ಧೆಯಿಂದ ಹಿಂದೆ ಸರಿದ ಬೆನ್ನಿಗೇ ವೈಯಕ್ತಿಕ ಕಾರಣಗಳನ್ನು ನೀಡಿ ಮತ್ತೊಬ್ಬ ಬಿಜೆಪಿ ಅಭ್ಯರ್ಥಿ 2024ರ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಸಬರ್ ಕಾಂತ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕಣಕ್ಕಿಳಿಸಿದ್ದ ಭಿಕಾಜಿ ಠಾಕೂರ್, ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಠಾಕೂರ್ ಅವರ ಉಪನಾಮ ಹಾಗೂ ಜಾತಿ ಗುರುತಿನ ಬಗ್ಗೆ ವಿವಾದ ಸೃಷ್ಟಿಯಾದ ಬೆನ್ನಿಗೇ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಬರ್ ಕಾಂತ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ದೀಪ್ ಸಿಂಗ್ ರಾಥೋಡ್ ಬದಲು ಭಿಕಾಜಿ ಠಾಕೋರ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
ಸಬರ್ ಕಾಂತ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಭಿಕಾಜಿ ಠಾಕೂರ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆಯೆ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಉಪನಾಮದ ಕುರಿತು ವಿವಾದ ಸೃಷ್ಟಿಯಾಗಿತ್ತು. ಅವರು ಈ ಮುನ್ನ ತಮ್ಮ ಉಪ ನಾಮವನ್ನು ‘ದಾಮೋರ್’ ಎಂದು ಬಳಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ವಿವಾದವು ಕ್ಷತ್ರಿಯ (ಠಾಕೂರ್) ಸಮುದಾಯದ ನಡುವೆ ಚರ್ಚೆಯ ಕಿಡಿ ಹಚ್ಚಿತ್ತು. ಈ ವಿವಾದದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಠಾಕೂರ್, ತಮ್ಮ ಠಾಕೂರ್ ಗುರುತನ್ನು ಮತ್ತೊಮ್ಮೆ ದೃಢಪಡಿಸಿದ್ದರಲ್ಲದೆ, ಬಿಜೆಪಿ ಹಿಂದುಳಿದ ವರ್ಗಗಳ ಘಟಕದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯ ಕುರಿತು ಎತ್ತಿ ಹೇಳಿದರು. ವಿರೋಧಿಗಳ ಕಾರ್ಯಸೂಚಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಅವರು, ಈ ಪ್ರಾಂತ್ಯದಲ್ಲಿನ ಭೌಗೋಳಿಕ ಹಿನ್ನೆಲೆಯ ಕುರಿತು ಸ್ಪಷ್ಟಪಡಿಸಿದ್ದರು.
ಉತ್ತರ ಮತ್ತು ಕೇಂದ್ರ ಗುಜರಾತ್ ನಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಠಾಕೂರ್ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. ಈ ಸಮುದಾಯವು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ರಾಜಕೀಯ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.
ಸ್ಪರ್ಧೆಯಿಂದ ಹಿಂದೆ ಸರಿಯುವ ಭಟ್ ಹಾಗೂ ಠಾಕೂರ್ ಅವರ ನಿರ್ಧಾರವನ್ನು ದೃಢಪಡಿಸಿರುವ ಬಿಜೆಪಿ ಪದಾಧಿಕಾರಿಯೊಬ್ಬರು, ಶೀಘ್ರವೇ ಪಕ್ಷವು ನೂತನ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ.