ಮೋದಿ ಸರಕಾರದಿಂದ ಲ್ಯಾಟರಲ್ ಎಂಟ್ರಿಗೆ ಮತ್ತೆ ಒತ್ತು | ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ, ನಿರ್ದೇಶಕರ 45 ಹುದ್ದೆಗಳಿಗೆ ಜಾಹೀರಾತು ಪ್ರಕಟಿಸಿದ ಯಪಿಎಸ್‌ಸಿ
ಹೊಸದಿಲ್ಲಿ : ಆಡಳಿತ ಸುಗಮತೆಯನ್ನು ಇನ್ನಷ್ಟು ಹೆಚ್ಚಿಸಲು ಹೊಸ ಪ್ರತಿಭೆಗಳನ್ನು ಸೇರಿಸಿಕೊಳ್ಳುವ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಅಂಗವಾಗಿ 45 ತಜ್ಞರು ಶೀಘ್ರವೇ ವಿವಿಧ ಕೇಂದ್ರ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಪ್ರಮುಖ ಹುದ್ದೆಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಸಾಮಾನ್ಯವಾಗಿ ಇಂತಹ ಹುದ್ದೆಗಳನ್ನು ಐಎಎಸ್, ಐಪಿಎಸ್ ಮತ್ತು ಐಎಫ್‌ಒಎಸ್ ಹಾಗೂ ಇತರ ಗ್ರೂಪ್ ಎ ಸೇವೆಗಳ ಅಧಿಕಾರಿಗಳು ನಿರ್ವಹಿಸುತ್ತಾರೆ.
ಗುತ್ತಿಗೆ ಆಧಾರದಲ್ಲಿ ಲ್ಯಾಟರಲ್ ಎಂಟ್ರಿ ವಿಧಾನದಲ್ಲಿ 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿಗಳು ಸೇರಿದಂತೆ 45 ಹುದ್ದೆಗಳಿಗೆ ನೇಮಕಾತಿಗಾಗಿ ಯುಪಿಎಸ್‌ಸಿ ಶನಿವಾರ ಜಾಹೀರಾತನ್ನು ಪ್ರಕಟಿಸಿದೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಗಳನ್ನು ಸಲ್ಲಿಸಲು ಸಿದ್ಧರಿರುವ ಪ್ರತಿಭಾವಂತ ಭಾರತೀಯ ಪ್ರಜೆಗಳಿಂದ ಆನ್‌ಲೈನ್ ಅರ್ಜಿಗಳನ್ನು ಅದು ಆಹ್ವಾನಿಸಿದೆ.
ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿರುವ ಈ ಖಾಲಿ ಹುದ್ದೆಗಳು ದಿಲ್ಲಿಯನ್ನು ಕೇಂದ್ರಸ್ಥಾನವನ್ನಾಗಿ ಹೊಂದಿವೆ. ಈ ಖಾಲಿ ಹುದ್ದೆಗಳನ್ನು (ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಕೇಡರ್‌ಗಳು,ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ಸ್ವಾಯತ್ತ ಸಂಸ್ಥೆಗಳು,ಶಾಸನಬದ್ಧ ಸಂಸ್ಥೆಗಳು,ವಿವಿಗಳು ಮತ್ತು ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳಿಗೆ ನಿಯೋಜನೆಯ ಮೇಲೆ) ಸೆ.17ರೊಳಗೆ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುವುದು. ಅಧಿಕಾರಾವಧಿಯು ಮೂರು ವರ್ಷಗಳದ್ದಾಗಿದ್ದು, ಕಾರ್ಯಕ್ಷಮತೆಯ ಆಧಾರದಲ್ಲಿ ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.
ಹುದ್ದೆಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡಲಾಗುವುದು. ಇದು ಸರಕಾರದಲ್ಲಿ ಹೊಸ ಪ್ರತಿಭೆಗಳು ಮತ್ತು ದೃಷ್ಟಿಕೋನವನ್ನು ತರುವ ಉದ್ದೇಶದೊಂದಿಗೆ ಸರಕಾರಿ ಇಲಾಖೆಗಳಲ್ಲಿ ಖಾಸಗಿ ಕ್ಷೇತ್ರದ ತಜ್ಞರ ನೇಮಕಾತಿ ಪ್ರಕ್ರಿಯೆಯಾಗಿದ್ದು,2018ರಿಂದ ಬಳಕೆಯಲ್ಲಿದೆ. ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಉನ್ನತ ಹುದ್ದೆಗಳು ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿವೆ.
ಲ್ಯಾಟರಲ್ ಎಂಟ್ರಿ ವಿಧಾನದ ಮೂಲಕ ಈವರೆಗೆ 63 ನೇಮಕಾತಿಗಳನ್ನು ಮಾಡಲಾಗಿದ್ದು, ಈ ಪೈಕಿ 35 ಹುದ್ದೆಗಳಿಗೆ ಖಾಸಗಿ ಕ್ಷೇತ್ರದ ತಜ್ಞರು ನೇಮಕಗೊಂಡಿದ್ದಾರೆ. ಪ್ರಸ್ತುತ 57 ಅಧಿಕಾರಿಗಳು ಸಚಿವಾಲಯಗಳು/ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.