ಚಿನ್ನಾಭರಣ ಮಳಿಗೆಗೆ ನುಗ್ಗಿ ಬಂದೂಕು ತೋರಿಸಿ ದರೋಡೆ ಮಾಡಿದ್ದ ಅಗ್ನಿವೀರ್ ನ ಬಂಧನ
ಭೋಪಾಲ್: ಭೋಪಾಲ್ ನ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿ, ಅಲ್ಲಿನ ಉದ್ಯೋಗಿಗಳಿಗೆ ಬಂದೂಕು ತೋರಿಸಿ ಬೆದರಿಸಿ, ರೂ. 50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದ ಭಾರತೀಯ ಸೇನೆಯ ಅಗ್ನಿವೀರ್ ಯೋಧ ಹಾಗೂ ಇನ್ನಿತರ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ಪ್ರಕಾರ, ಆರೋಪಿಯನ್ನು ಮೋಹಿತ್ ಸಿಂಗ್ ಬಘೇಲ್ ಎಂದು ಗುರುತಿಸಲಾಗಿದ್ದು, ಆತ ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನನ್ನು ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಜೆಯ ಮೇಲೆ ಆತ ತನ್ನ ಭಾಮೈದುನನ್ನು ಭೇಟಿ ಮಾಡಲು ಭೋಪಾಲ್ ಗೆ ಬಂದಿದ್ದ. ತನ್ನ ಭಾಮೈದುನ ಮಾಡಿಕೊಂಡಿದ್ದ ಸಾಲವನ್ನು ತೀರಿಸಿ, ಉಳಿದ ಹಣದಲ್ಲಿ ತಾನು ಮೋಜು ಮಾಡಲು ದರೋಡೆಯ ಸಂಚನ್ನು ಆತ ರೂಪಿಸಿದ್ದ ಎಂದು ಹೇಳಲಾಗಿದೆ.
ಆಗಸ್ಟ್ 13ರಂದು ಬಘೇಲ್ ಹಾಗೂ ಆತನ ಸ್ನೇಹಿತ ಆಕಾಶ್ ರಾಯ್ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವಂತೆ ಶಿರಸ್ತ್ರಾಣ ತೊಟ್ಟುಕೊಂಡು ಬಂದಿದ್ದ ಬಘೇಲ್ ಹಾಗೂ ರಾಯ್ ಇಬ್ಬರೂ, ಮಳಿಗೆಯ ಉದ್ಯೋಗಿಗೆ ಪಿಸ್ತೂಲಿನಿಂದ ಬೆದರಿಸಿ, ಚಿನ್ನಾಭರಣ ಹಾಗೂ ನಗದನ್ನು ನೀಡುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.
ಇದರ ಬೆನ್ನಿಗೇ, ಬಘೇಲ್ ಮತ್ತು ರಾಯ್ ಚಿನ್ನಾಭರಣ ಹಾಗೂ ನಗದಿನೊಂದಿಗೆ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ನಂತರ, ಅಪರಾಧ ನಡೆದ ಸ್ಥಳದಿಂದ 20 ಕಿಮೀ ಸುತ್ತಳತೆಯಲ್ಲಿನ ಸುಮಾರು 400 ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದರು ಎಂದು ಮಿಶ್ರಾ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ನಾಲ್ಕು ಪೊಲೀಸ್ ತಂಡಗಳು ಪರಿಶೀಲನೆ ನಡೆಸಿದವು ಹಾಗೂ ಆ ದೃಶ್ಯಾವಳಿಗಳಿಂದ ಬಘೇಲ್ ನನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸ್ ಆಯುಕ್ತ ಮಿಶ್ರಾ ತಿಳಿಸಿದ್ದಾರೆ. ಇದರೊಂದಿಗೆ ಈ ಬಂಧನಕ್ಕೆ ನೆರವಾಗಲು ಮಾಹಿತಿ ನೀಡಿದವರಿಗೆ ರೂ. 50,000 ಬಹುಮಾನವನ್ನೂ ಅವರು ಘೋಷಿಸಿದ್ದಾರೆ.
ಅಪರಾಧ ನಡೆಸುವುದಕ್ಕೂ ಮುನ್ನ ಬಘೇಲ್ ಆ ಚಿನ್ನಾಭರಣ ಮಳಿಗೆಯ ಮೇಲೆ ರಾತ್ರಿ ಹೊತ್ತು ನಿಗಾ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಘೇಲ್ ನ ಗುರುತು ಪರಿಶೀಲನೆ ನಡೆಸಲು ಭಾರತೀಯ ಸೇನೆಯಿಂದ ಆತನ ವಿವರಗಳನ್ನು ಕೋರಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಬಘೇಲ್ ನೊಂದಿಗೆ ಇನ್ನಿತರ ಆರೋಪಿಗಳಾದ ವಿಕಾಸ್ ರಾಯ್ (ಆಕಾಶ್ ರಾಯ್ ನ ಸಹೋದರ), ಮೋನಿಕಾ ರಾಯ್ (ಆಕಾಶ್ ರಾಯ್ ನ ಸಹೋದರಿ), ಅಮಿತ್ ರಾಯ್ (ಆಕಾಶ್ ರಾಯ್ ನ ಭಾಮೈದುನ), ಗಾಯತ್ರಿ ರಾಯ್ (ಆಕಾಶ್ ರಾಯ್ ನ ತಾಯಿ) ಹಾಗೂ ಆಭಯ್ ಮಿಶ್ರಾ (ಆಕಾಶ್ ರಾಯ್ ನ ಮಿತ್ರ) ಅನ್ನೂ ಬಂಧಿಸಲಾಗಿದೆ.
ಬಘೇಲ್ ಹಾಗೂ ಆಕಾಶ್ ರಾಯ್ ಅಪರಾಧ ಕೃತ್ಯವೆಸಗಲು ನೆರವು ನೀಡಿದ್ದಕ್ಕೆ ಹಾಗೂ ಅವರು ದರೋಡೆ ಮಾಡಿದ್ದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಕ್ಕೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಅಭಯ್ ಮಿಶ್ರಾ ಎಂಬ ಆರೋಪಿಯು ಬಘೇಲ್ ಗೆ ಪಿಸ್ತೂಲ್ ಒದಗಿಸಿದ್ದ ಎನ್ನಲಾಗಿದೆ.