ಗುದನಾಳದಲ್ಲಿ ಸುಮಾರು ಒಂದು ಕೆಜಿ ಚಿನ್ನ ಪತ್ತೆ | ಏರ್ ಇಂಡಿಯಾದ ಗಗನ ಸಖಿಯ ಬಂಧನ
ಕಣ್ಣೂರು (ಕೇರಳ): ತನ್ನ ಗುದನಾಳದಲ್ಲಿ ಸುಮಾರು ಒಂದು ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡು ಮಸ್ಕತ್‌ನಿಂದ ಕಣ್ಣೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಗಗನ ಸಖಿಯೋರ್ವಳನ್ನು ಬಂಧಿಸಲಾಗಿದೆ ಎಂದು ಇಂದು ಕಂದಾಯ ಗುಪ್ತಚರ ನಿರ್ದೇಶನಾಲಯ(DRI)ವು ತಿಳಿಸಿದೆ.
ಕೊಚ್ಚಿನ್ನ ಕಂದಾಯ ಗುಪ್ತಚರ ನಿರ್ದೇಶನಾಲಯವು ನೀಡಿದ ನಿರ್ದಿಷ್ಟ ಸುಳಿವನ್ನು ಆಧರಿಸಿ ಕಣ್ಣೂರಿನ ಆದಾಯ ಗುಪ್ತಚರ ನಿರ್ದೇಶನಾಲಯವು ಕ್ಯಾಬಿನ್ ಸಿಬ್ಬಂದಿ ಸುತಭಿ ಖತುನ್‌ರನ್ನು ಭೇದಿಸಿದೆ. ಕೋಲ್ಕತ್ತಾ ನಿವಾಸಿಯಾದ ಸುರಭಿ ಖತುನ್ ಮೇ 28ರಂದು ಮಸ್ಕತ್‌ನಿಂದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಆಕೆಯನ್ನು ವೈಯಕ್ತಿಕ ತಪಾಸಣೆಗೊಳಪಡಿಸಿದಾಗ, ಆಕೆ ತನ್ನ ಗುದನಾಳದಲ್ಲಿ ಗಟ್ಟಿಯ ರೂಪದಲ್ಲಿ ಬಚ್ಚಿಟ್ಟುಕೊಂಡಿದ್ದ ಸುಮಾರು 960 ಗ್ರಾಮ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಕೆಯನ್ನು ವಿಚಾರಣೆಗೊಳಪಡಿಸಿ, ಅಗತ್ಯ ಔಪಚಾರಿಕತೆಯನ್ನು ಪೂರೈಸಿದ ನಂತರ ಆಕೆಯನ್ನು ಸಂಬಂಧಿಸಿದ ವ್ಯಾಪ್ತಿಯ ದಂಡಾಧಿಕಾರಿ ಎದುರು ಹಾಜರುಪಡಿಸಲಾಯಿತು. ನಂತರ ಆಕೆಯನ್ನು 14 ದಿನಗಳ ಕಾಲ ಕಣ್ಣೂರಿನಲ್ಲಿರುವ ಮಹಿಳಾ ಕಾರಾಗೃಹಕ್ಕೆ ರವಾನಿಸಲಾಯಿತು.
ತನ್ನ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದ ಕ್ಯಾಬಿನ್ ಸಿಬ್ಬಂದಿ ಸದಸ್ಯರೊಬ್ಬರು ಬಂಧನವಾಗಿರುವ ಪ್ರಕರಣ ಭಾರತದಲ್ಲಿ ಇದೇ ಮೊದಲಾಗಿದೆ ಎಂದು ಹೇಳಲಾಗಿದೆ.