ಮಹಾರಾಷ್ಟ್ರ ಸರಕಾರವನ್ನು ಸೇರಿದ ಅಜಿತ್ ಪವಾರ್: ಕೊನೆಗೂ ಶರದ್ ಪವಾರ್ ಅವರ ಎಂವಿಎ ಅನ್ನು ಒಡೆದ ಬಿಜೆಪಿ
ಮುಂಬೈ: ಎನ್ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಅವರು ರವಿವಾರ ಪಕ್ಷದ ಇತರ ಹಲವು ಶಾಸಕರೊಂದಿಗೆ ಮಹಾರಾಷ್ಟ್ರ ಸರಕಾರದಲ್ಲಿ ಸೇರ್ಪಡೆಗೊಂಡಿದ್ದಾರೆ. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಅಜಿತ ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆಗೆ ಹುದ್ದೆಯನ್ನು ಹಂಚಿಕೊಳ್ಳಲಿದ್ದಾರೆ.
ಎನ್ಸಿಪಿಯ 53 ಶಾಸಕರ ಪೈಕಿ 40ಕ್ಕೂ ಅಧಿಕ ಶಾಸಕರ ಬೆಂಬಲವನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಅಜಿತ್ ಪವಾರ್ ಅವರ ನಡೆಯಿಂದ ಕಳೆದ 24 ವರ್ಷಗಳಿಂದಲೂ ಹಲವಾರು ಸವಾಲುಗಳನ್ನು ಎದುರಿಸಿ ಎನ್ಸಿಪಿಯನ್ನು ಮುನ್ನಡೆಸಿಕೊಂಡು ಬಂದಿರುವ ಪಕ್ಷದ ಸ್ಥಾಪಕ ಶರದ ಪವಾರ್ ತೀರ ಮುಜುಗರಕ್ಕೆ ಒಳಗಾಗಿದ್ದಾರೆ. ತನ್ನ ಸೋದರನ ಪುತ್ರ ಒಂದು ದಿನ ತನ್ನ ಬುಡಕ್ಕೇ ನೀರು ಕಾಯಿಸುತ್ತಾನೆ ಎಂದು ಅವರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.
ರಾಜ್ಯದಲ್ಲಿಯ ವಿಪಕ್ಷ ಮಹಾವಿಕಾಸ ಅಘಾಡಿ (MVA)ಯನ್ನು ಒಡೆಯಲು ಬಿಜೆಪಿ ಕಳೆದರಡು ವರ್ಷಗಳಲ್ಲಿ ಎರಡು ಸಲ ಪ್ರಯತ್ನಿಸಿತ್ತು.
ಅಜಿತ್ ಪವಾರ್ ಜೊತೆ ಇತ್ತೀಚಿಗಷ್ಟೇ ಸುಪ್ರಿಯಾ ಸುಳೆ ಅವರೊಂದಿಗೆ ಎನ್ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಷ್ರಿಫ್, ರಾಮರಾಜೆ ನಿಂಬಾಳ್ಕರ್, ಧನಂಜಯ ಮುಂಡೆ, ಅದಿತಿ ತಟ್ಕರೆ, ಸಂಜಯ್ ಬನ್ಸೋಡೆ, ಧರ್ಮರಾವ ಬಾಬಾ ಅತ್ರಂ ಮತ್ತು ಅನಿಲ್ ಭಾಯಿದಾಸ್ ಪಾಟೀಲ್ ಅವರು ರವಿವಾರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಂಪುಟವು ಶೀಘ್ರವೇ ವಿಸ್ತರಣೆಗೊಳ್ಳಲಿದೆ ಎಂದು ಫಡ್ನವೀಸ್ ಶುಕ್ರವಾರವಷ್ಟೇ ಹೇಳಿದ್ದರು. ಮುಖ್ಯಮಂತ್ರಿ ಏಕನಾಥ ಶಿಂದೆ ಅವರೂ ಇತ್ತೀಚಿಗೆ ದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು.
‘ಈಗ ನಾವು ಓರ್ವ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಡಬಲ್ ಇಂಜಿನ್ ಸರಕಾರ ಈಗ ಟ್ರಿಪಲ್ ಇಂಜಿನ್ ಸರಕಾರವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾನು ಅಜಿತ ಪವಾರ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ. ಅಜಿತ ಪವಾರ ಅವರ ಅನುಭವ ನಮಗೆ ನೆರವಾಗಲಿದೆ ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಅಜಿತ್ ಪವಾರ್ ಎನ್ಸಿಪಿ ಶಾಸಕರ ಗುಂಪಿನೊಂದಿಗೆ ಸೇರ್ಪಡೆಗೊಂಡರೆ ತಾನು ಸರಕಾರದಿಂದ ಹೊರನಡೆಯುವುದಾಗಿ ಇದೇ ಶಿಂದೆ ಕಳೆದ ಎಪ್ರಿಲ್ನಲ್ಲಿ ಬೆದರಿಕೆಯೊಡ್ಡಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ಶರದ್ ಪವಾರ್ ತನ್ನ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಎನ್ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪದೋನ್ನತಿಗೊಳಿಸುವ ಮೂಲಕ ಅಜಿತ ಪವಾರಗೆ ಆಘಾತವನ್ನು ನೀಡಿದ್ದರು. ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಮುಂದುವರಿಯಲು ತಾನು ಬಯಸುವುದಿಲ್ಲ ಎಂದು ಅಜಿತ ಪವಾರ ಇತ್ತೀಚಿಗೆ ಹೇಳಿದ್ದರು.
ತನ್ನೆದುರಿನ ಬೃಹತ್ ಸವಾಲು ಆಗಿದ್ದ ಎಂವಿಎ ಮೈತ್ರಿಕೂಟವನ್ನು ಒಡೆಯಲು ಶಿಂದೆ ನೇತೃತ್ವದ ಸರಕಾರವು ಬಯಸಿತ್ತು. ಕೊನೆಗೂ ಅದು ತನ್ನ ಗುರಿಯನ್ನು ಸಾಧಿಸಿದೆ.
ಪ್ರತಿಪಕ್ಷಗಳನ್ನು ಒಂದಾಗಿಸಲು ಶರದ ಪವಾರ ಪ್ರಯತ್ನಿಸುತ್ತಿದ್ದಾರೆ.ಆದರೆ ತನ್ನದೇ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.
ಅಜಿತ್ ಪವಾರ್ ಪಕ್ಷಾಂತರ ನಿಷೇಧ ಕಾನೂನಿನಿಂದ ಪಾರಾಗಲು ಎನ್ಸಿಪಿಯ 53 ಶಾಸಕರ ಪೈಕಿ ಕನಿಷ್ಠ 36 ಶಾಸಕರನ್ನು ತನ್ನೊಂದಿಗೆ ಒಯ್ಯವ ಅಗತ್ಯವಿದೆ. ಸಂವಿಧಾನದ 10ನೇ ಅನುಸೂಚಿಯಡಿ ಎನ್ಸಿಪಿ ಈಗಲೂ ಎಲ್ಲ ಬಂಡುಕೋರ ಶಾಸಕರ ಅನರ್ಹತೆಗೆ ಕ್ರಮ ಕೈಗೊಳ್ಳಬಹುದು. ಅಜಿತ ಪವಾರ್ ತನ್ನದೇ ಅಸಲಿ ಎನ್ಸಿಪಿ ಎಂದು ಚುನಾವಣಾ ಆಯೋಗದ ಎದರು ಸಾಬೀತು ಮಾಡುವವರೆಗೂ ಅವರ ಮತ್ತು ಬೆಂಬಲಿಗ ಶಾಸಕರ ತಲೆಯ ಮೇಲೆ ಅನರ್ಹತೆಯ ಕತ್ತಿ ತೂಗಾಡುತ್ತಲೇ ಇರುತ್ತದೆ.