ಮತ ಹಾಕಿದರೆ ಮಾತ್ರ ಅಭಿವೃದ್ಧಿ ಯೋಜನೆಗೆ ಹಣ ಎಂದ ಅಜಿತ್ ಪವಾರ್ | ತನಿಖೆಗೆ ಚುನಾವಣಾ ಆಯೋಗ ಆದೇಶ
ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಮತಗಳನ್ನು ಹಾಕಿದವರಿಗೆ ಮಾತ್ರ ನಾನು ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತೇನೆ ಎಂಬುದಾಗಿ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೀಡಿರುವ ಹೇಳಿಕೆಯ ಬಗ್ಗೆ ತನಿಖೆ ನಡೆಸಲು ಪುಣೆಯ ಅಧಿಕಾರಿಗಳಿಗೆ ರಾಜ್ಯದ ಮುಖ್ಯ ಚುನಾವಣಾ ಕಚೇರಿ ಗುರುವಾರ ಸೂಚನೆ ನೀಡಿದೆ.
ಅಜಿತ್ ಪವಾರ್ ವಿರುದ್ಧ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (ಶರದ್ಚಂದ್ರ ಪವಾರ್) ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
‘‘ನಮಗೆ ಈಗಷ್ಟೇ ದೂರು ಬಂದಿದೆ’’ ಎಂದು ಮುಖ್ಯ ಚುನಾವಣಾ ಕಚೇರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ‘‘ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ವರದಿ ಸಲ್ಲಿಸುವಂತೆ ಜಿಲ್ಲಾ ಅಧಿಕಾರಿಗೆ ನಾವು ಸೂಚನೆ ನೀಡಿದ್ದೇವೆ’’ ಎಂದರು.
ಮಹಾಯುತಿ ಮೈತ್ರಿಕೂಟವು ಈ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ರ ಪತ್ನಿ ಸುನೇತ್ರಾ ಪವಾರ್ರನ್ನು ಬಾರಾಮತಿ ಕ್ಷೇತ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ಚಂದ್ರ ಪವಾರ್) ನಾಯಕಿ ಸುಪ್ರಿಯಾ ಸುಳೆ ವಿರುದ್ಧ ಕಣಕ್ಕಿಳಿಸಿದೆ. ಸುಪ್ರಿಯಾ ಸುಳೆ ಈ ಕ್ಷೇತ್ರವನ್ನು 2009ರಿಂದಲೂ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಬೇಕೋ ಅಷ್ಟು ಹಣವನ್ನು ನನ್ನ ಸರಕಾರವು ಮಂಜೂರು ಮಾಡುತ್ತದೆ ಎಂದು ಬುಧವಾರ ಬಾರಾಮತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಂದಪುರ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು. ‘‘ಆದರೆ, ನಾವು ನಿಮಗೆ ಹಣ ಕೊಡಬೇಕಾದರೆ, ಈ ಚುನಾವಣೆಯಲ್ಲಿ ನೀವು ನಮ್ಮ ಅಭ್ಯರ್ಥಿಯ ಹೆಸರಿನ ಪಕ್ಕದಲ್ಲಿರುವ ಗುಂಡಿಯನ್ನು ಒತ್ತಬೇಕು. ಆಗ ನಿಧಿಗಳನ್ನು ನೀಡಲು ನನಗೆ ಖುಷಿಯಾಗುತ್ತದೆ’’ ಎಂದು ಅವರು ಹೇಳಿದ್ದರು. ‘‘ಇಲ್ಲದಿದ್ದರೆ, ನನ್ನ ಕೈ ಕಟ್ಟುತ್ತದೆ’’ ಎಂದಿದ್ದರು.