ಅಜಿತ್ ಪವಾರ್ ಬಣ ನಿಜವಾದ ಎನ್ ಸಿ ಪಿ| ಚುನಾವಣಾ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶರದ್ ಪವಾರ್

Update: 2024-02-13 14:52 GMT

                                                                                         ಶರದ್ ಪವಾರ್ | Photo : ANI  

ಹೊಸದಿಲ್ಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಪರಿಗಣಿಸಿ ಚುನಾವಣಾ ಆಯೋಗ ನೀಡಿದ ಆದೇಶ ಪ್ರಶ್ನಿಸಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಸ್ಥಾಪಕ ಶರದ್ ಪವಾರ್ ಅವರು ಸೋಮವಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ.

ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಶರದ್ ಪವಾರ್ ಬಣ ಅರ್ಜಿ ಸಲ್ಲಿಸಿದರೆ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡುವಂತೆ ಕೋರಿ ಅಜಿತ್ ಪವಾರ್ ನೇತೃತ್ವದ ಬಣ ಕಳೆದ ವಾರ ನ್ಯಾಯಾಲಯದ ಮುಂದೆ ಕೇವಿಯಟ್ ಸಲ್ಲಿಸಲು ವಿಫಲವಾಗಿತ್ತು.

ಚುನಾವಣಾ ಆಯೋಗ ಫೆಬ್ರವರಿ 6ರಂದು ಅಜಿತ್ ಪವಾರ್ ಬಣವನ್ನು ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಪರಿಗಣಿಸಿತ್ತು ಹಾಗೂ ಗಡಿಯಾರದ ಚಿಹ್ನೆಯನ್ನು ಮಂಜೂರು ಮಾಡಿತ್ತು.

ಕಳೆದ ಜುಲೈಯಲ್ಲಿ ಎನ್ಸಿಪಿಯ ಹಲವು ಶಾಸಕರೊಂದಿಗೆ ಅಜಿತ್ ಪವಾರ್ ಅವರು ಬಿಜೆಪಿ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣವನ್ನು ಒಳಗೊಂಡ ಮಹಾರಾಷ್ಟ್ರ ಮೈತ್ರಿ ಸರಕಾರಕ್ಕೆ ಸೇರಿದ್ದರು.

ಈ ನಡೆ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಲ್ಲಿ ವಿಭಜನೆಗೆ ಕಾರಣವಾಗಿತ್ತು. ಒಂದು ಬಣ ಶರದ್ ಪವಾರ್ ಅವರಿಗೆ ಬೆಂಬಲ ನೀಡಿದೆರೆ, ಇನ್ನೊಂದು ಬಣ ಅಜಿತ್ ಪವಾರ್ ಅವರಿಗೆ ಬೆಂಬಲ ನೀಡಿತು.

ಮಹಾರಾಷ್ಟ್ರದ 6 ರಾಜ್ಯ ಸಭಾ ಸ್ಥಾನಗಳಿಗೆ ಫೆಬ್ರವರಿ 27ರಂದು ನಡೆಯಲಿರುವ ಚುನಾವಣೆಗೆ ನೂತನ ಹೆಸರನ್ನು ಬಳಸಲು ಚುನಾವಣಾ ಆಯೋಗ ಶರದ್ ಪವಾರ್ ಬಣಕ್ಕೆ ಅನುಮತಿ ನೀಡಿತ್ತು. ಅದು ಫೆಬ್ರವರಿ 7ರಂದು ಶರದ್ ಪವಾರ್ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಎಂಬ ಹೆಸರು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News