ಕಾಶಿ ದೇವಾಲಯದಲ್ಲಿ ಪೊಲೀಸರಿಗೆ ಅರ್ಚಕರ ದಿರಿಸು: ಅಖಿಲೇಶ್ ಯಾದವ್ ಖಂಡನೆ

Update: 2024-04-12 09:57 GMT

Photo credit: ANI

ಹೊಸದಿಲ್ಲಿ: ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಕರ್ತವ್ಯದ ಮೇಲೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು ಅರ್ಚಕರ ದಿರಿಸು ಧರಿಸಿರುವುದು ವಿವಾದದ ಕಿಡಿ ಹೊತ್ತಿಸಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರದ ಬದಲು ಬೇರೆ ಯಾವುದೇ ವಸ್ತ್ರಗಳನ್ನು ತೊಡಲು ಅವಕಾಶ ನೀಡುವ ನಿರ್ಧಾರದಿಂದ ಭದ್ರತಾ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಿಮದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಪೊಲೀಸ್ ಕೈಪಿಡಿಯ ಪ್ರಕಾರ, ಪೊಲೀಸ್ ಅಧಿಕಾರಿಗಳು ಅರ್ಚಕರ ರೀತಿ ವಸ್ತ್ರ ತೊಡುವುದು ಸರಿಯೆ? ಇಂತಹ ಆದೇಶ ನೀಡಿರುವವರನ್ನು ಅಮಾನತುಗೊಳಿಸಬೇಕು. ಒಂದು ವೇಳೆ ನಾಳೆ ಯಾರಾದರೂ ವಂಚಕನು ಇದರ ಲಾಭ ಪಡೆದು ಮುಗ್ಧ ಜನರನ್ನು ಲೂಟಿ ಮಾಡಿದರೆ, ಉತ್ತರ ಪ್ರದೇಶ ಸರಕಾರ ಹಾಗೂ ಆಡಳಿತವು ಏನು ಉತ್ತರ ನೀಡುತ್ತದೆ? ಇದು ಖಂಡನೀಯ!” ಎಂದು ಟೀಕಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥರೂ ಆಗಿರುವ ಅಖಿಲೇಶ್ ಯಾದವ್ ಹೊಸ ವಿಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದು, ಈ ವಿಡಿಯೊದಲ್ಲಿ ಪೊಲೀಸ್ ಅಧಿಕಾರಿಗಳು ಸಾಂಪ್ರದಾಯಿಕ ಉಡುಗೆಯಲ್ಲಿರುವುದನ್ನು ನೋಡಬಹುದಾಗಿದೆ. ಪುರುಷ ಪೊಲೀಸ್ ಅಧಿಕಾರಿಗಳು ಪಂಚೆ ಹಾಗೂ ಕುರ್ತಾವನ್ನು ತೊಟ್ಟಿದ್ದರೆ, ಮಹಿಳಾ ಪೊಲೀಸ್ ಅಧಿಕಾರಿಗಳು ಸಲ್ವಾರ್ ಕುರ್ತಾ ತೊಟ್ಟಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಆದರೆ, ಈ ವಿವಾದಾತ್ಮಕ ಕ್ರಮವನ್ನು ಸಮರ್ಥಿಸಿಕೊಂಡಿರುವ ವಾರಣಾಸಿ ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್, ಜನಜಂಗುಳಿ ನಿಯಂತ್ರಣ ಹಾಗೂ ಭಕ್ತರ ಒಳಿತಿಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಾರಣ ನೀಡಿದ್ದಾರೆ. ಅರ್ಚಕರ ದಿರಿಸಿನಂಥ ಸಾಂಪ್ರದಾಯಕ ಉಡುಗೆಯನ್ನು ತೊಡುವುದರಿಂದ ಯಾತ್ರಾರ್ಥಿಗಳೊಂದಿಗೆ ಸಕಾರಾತ್ಮಕ ಸಂವಾದ ನಡೆಸಬಹುದು ಹಾಗೂ ಅಶಾಂತಿ ಅಥವಾ ದೊಂಬಿಯಂಥ ಅಪಾಯವನ್ನು ತಗ್ಗಿಸಬಹುದು ಎಂದು ಅವರು ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News