ಇಸ್ರೇಲಿ ವಾಯುದಾಳಿಗೆ ಅಲ್ ಜಝೀರಾದ ಗಾಝಾ ಮುಖ್ಯ ವರದಿಗಾರನ ಪತ್ನಿ, ಮಕ್ಕಳು ಬಲಿ
ಹೊಸದಿಲ್ಲಿ: ಗಾಝಾ ಪಟ್ಟಿಯಲ್ಲಿ ಅಲ್ ಜಝೀರಾ ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ವಾಯಿಲ್ ದಹ್ದೌಹ್ ಅವರ ಪತ್ನಿ, ಪುತ್ರ ಮತ್ತು ಏಳು ವರ್ಷದ ಪುತ್ರಿ ಬುಧವಾರ ಇಸ್ರೇಲಿ ವಾಯು ದಾಳಿಗೆ ಬಲಿಯಾಗಿದ್ದಾರೆ. ವಾಯಿಲ್ ಅವರು ಗಾಝಾದ ಪರಿಸ್ಥಿತಿಯ ಬಗ್ಗೆ ನೇರ ಚಿತ್ರಣವನ್ನು ಪ್ರಸಾರ ಮಾಡಲು ಸಹಕರಿಸುತ್ತಿರುವ ವೇಳೆಯೇ ತಮ್ಮ ಕುಟುಂಬ ವಾಯು ದಾಳಿಗೆ ಬಲಿಯಾಗಿರುವ ಸುದ್ದಿ ಅವರನ್ನು ತಲುಪಿದೆ.
“ನಮ್ಮ ಮೇಲಿನ ಪ್ರತೀಕಾರವನ್ನು ನಮ್ಮ ಮಕ್ಕಳ ಮೇಲೆ ತೀರಿಸುತ್ತಾರೆಯೇ?,” ಎಂದು ತಮ್ಮ ಪುತ್ರನ ರಕ್ತಸಿಕ್ತ ಮೃತದೇಹದೆದುರು ಅವರು ದುಃಖದಿಂದ ಹೇಳುತ್ತಿರುವ ವೀಡಿಯೋವೊಂದನ್ನು ಕತರ್ ಮೂಲದ ಉಪಗ್ರಹ ಚಾನಲ್ ಪ್ರಸಾರ ಮಾಡಿದೆ. ದಹ್ದೌಹ್ ಅವರ ಮೊಮ್ಮಗ ಕೂಡ ಬಲಿಯಾಗಿರುವ ಸುದ್ದಿ ನಂತರ ಬಂದಿದೆ.
ದಹ್ದೌಹ್ (53) ಅವರು ತಮ್ಮ ಊರಾದ ಗಾಝಾದ ಜನರ ನೋವಿನ ಚಿತ್ರಣವನ್ನು ಹೊರಜಗತ್ತಿನ ಮುಂದಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನುಸೇರತ್ ನಿರಾಶ್ರಿತರ ಶಿಬಿರದ ಮೇಳೆ ಇಸ್ರೇಲಿ ವಾಯು ದಾಳಿ ನಡೆದಾಗ ವರ ಪತ್ನಿ ಮತ್ತು ಮಕ್ಕಳು ಬಲಿಯಾದರೆಂದು ವರದಿಯಾಗಿದೆ. ಅವರ ಹಲವಾರು ಸಂಬಂಧಿಗಳೂ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನುಸೀರತ್ ಪ್ರದೇಶದ ಮನೆಯೊಂದರಲ್ಲಿ ದಹ್ದೌಹ್ ಅವರ ಕುಟುಂಬ ಗಾಝಾದಲ್ಲಿನ ತನ್ನ ಮನೆ ಕಳೆದುಕೊಂಡ ನಂತರ ವಾಸಿಸುತ್ತಿತ್ತು.