ಜಾತಿ ಸಮೀಕ್ಷೆ ತಡೆಯಲು ಬಿಜೆಪಿಯಿಂದ ಸರ್ವತಂತ್ರ; ಪ್ರತಿಪಕ್ಷಗಳ ಆರೋಪ

Update: 2023-08-29 15:22 GMT

ಸಾಂದರ್ಭಿಕ ಚಿತ್ರ.| Photo: PTI

ಹೊಸದಿಲ್ಲಿ: ಜಾತಿ ಸಮೀಕ್ಷೆ ನಡೆಸುವ ಬಿಹಾರ ಸರಕಾರದ ನಿರ್ಧಾರದ ಬಗ್ಗೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿದಾವಿತ್ ಮತ್ತು ಗಂಟೆಗಳ ಬಳಿಕ ಅದಕ್ಕೆ ಮಾಡಿದ ತಿದ್ದುಪಡಿಯ ಬಗ್ಗೆ ಪ್ರತಿಪಕ್ಷಗಳು ಕೆಂಡ ಕಾರಿವೆ. ಇದು ‘‘ಬಿಜೆಪಿ ಏನೆಂಬುದನ್ನು ಮತ್ತು ಅದರ ಉದ್ದೇಶ ಸಮೀಕ್ಷೆಗೆ ತಡೆಯೊಡ್ಡುವುದು ಎನ್ನುವುದನ್ನು ತೋರಿಸಿದೆ’’ ಎಂದು ಅವು ಹೇಳಿವೆ.

‘‘ಜನಗಣತಿ ಅಥವಾ ಜನಗಣತಿಯಂಥ ಯಾವುದೇ ಕಸರತ್ತನ್ನು ಕೇಂದ್ರ ಸರಕಾರ ಮಾತ್ರ ಮಾಡಬಹುದಾಗಿದೆ’’ ಎಂದು ಕೇಂದ್ರ ಸರಕಾರ ಸೋಮವಾರ ಸಲ್ಲಿಸಿದ ಅಫಿದಾವಿತ್ ನಲ್ಲಿ ಹೇಳಿತ್ತು. ಆದರೆ, ಗಂಟೆಗಳ ಬಳಿಕ ಕೇಂದ್ರ ಸರಕಾರವು ಹೊಸ ಅಫಿದಾವಿತನ್ನು ಸಲ್ಲಸಿತು. ಅದರಿಂದ ಈ ಹೇಳಿಕೆಯನ್ನು ತೆಗೆದುಹಾಕಲಾಗಿತ್ತು. ಈ ಹೇಳಿಕೆಯು ‘‘ಅನುದ್ದಿಶ್ಯವಾಗಿ ನುಸುಳಿಕೊಂಡಿತ್ತು’’ ಎಂದು ಹೊಸ ಅಫಿದಾವಿತ್ ನಲ್ಲಿ ಹೇಳಲಾಗಿದೆ.

ಈಗ ಈ ಎರಡು ಅಫಿದಾವಿತ್ ಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ಸಂಯುಕ್ತ ಜನತಾ ದಳ (ಜೆಡಿಯು) ಮತ್ತು ಅದರ ಮಿತ್ರ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

ಜಾತಿ ಗಣತಿಯನ್ನು ತಡೆಯಲು ಪ್ರಧಾನಿ ಕಚೇರಿಯು ಎಲ್ಲಾ ತಂತ್ರಗಳನ್ನು ಬಳಸುತ್ತಿದೆ ಎಂದು ಆರ್ಜೆಡಿಯ ರಾಜ್ಯಸಭಾ ಸದಸ್ಯ ಮನೋಜ್ಕುಮಾರ್ ಝಾ ಆರೋಪಿಸಿದರು. ‘‘ಜನಸಂಖ್ಯೆಯ ಬೃಹತ್ ಭಾಗವೊಂದರ ಹಕ್ಕುಗಳನ್ನು ಕಸಿದುಕೊಳ್ಳುವುದು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಅತ್ಯಂತ ಮುಖ್ಯವಾಗಿದೆ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ’’ ಎಂದು ಝಾ ಹೇಳಿದರು.

ಬೆನ್ನು ಬೆನ್ನಿಗೆ ಎರಡು ಅಫಿದಾವಿತ್ ಗಳನ್ನು ಸಲ್ಲಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಸ್ತಾವಿಸಿದ ಅವರು, ‘‘ಇದು ಅನುದ್ದಿಶ್ಯವಾಗಿ ನಡೆದದ್ದಲ್ಲ. ಉದ್ದೇಶಪೂರ್ವಕವಾಗಿ ಮಾಡಿದ್ದು. ನಾನು ಸರಕಾರವನ್ನು ಎಚ್ಚರಿಸುತ್ತಿದ್ದೇನೆ... ಹಿಂಬಾಗಿಲು ಮತ್ತು ಮುಂಬಾಗಿಲ ವಿಧಾನಗಳ ಮೂಲಕ ಈ ವರ್ಗದ ಜನರ ಹಕ್ಕುಗಳನ್ನು ಹತ್ತಿಕ್ಕಲು ನೀವು ಪ್ರಯತ್ನಿಸಿದರೆ ಜ್ವಾಲಾಮುಖಿಯೇ ಸ್ಫೋಟಗೊಳ್ಳುತ್ತದೆ’’ ಎಂದು ಹೇಳಿದರು.

‘‘ನಾನು ನಿಮಗೆ ಹೇಳುತ್ತಿದ್ದೇನೆ. ಇದನ್ನು ತಡೆಯಲು ನಿಮಗೆ ಸಾಧ್ಯವಿಲ್ಲ. ಇದು ನಿಮ್ಮ ನಿಜಬಣ್ಣವನ್ನು ಬಯಲಿಗೆಳೆಯುತ್ತದೆ ಅಷ್ಟೆ’’ ಎಂದು ಅವರು ಹೇಳಿದರು.

ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಜೆಡಿಯು ನಾಯಕ ಹಾಗೂ ಬಿಹಾರದ ಸಂಸದೀಯ ವ್ಯವಹಾರಗಳ ಸಚಿವ ವಿಜಯ ಕುಮಾರ್ ಚೌಧರಿ, ಜನಗಣತಿಯೊಂದನ್ನು ನಡೆಸುವ ಅಧಿಕಾರ ತನಗೆ ಮಾತ್ರ ಇದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ‘‘ಇದು ಹಾಸ್ಯಾಸ್ಪದ ನಾವು ನಡೆಸುತ್ತಿರುವುದು ಜನಗಣತಿಯಲ್ಲ, ಸಮೀಕ್ಷೆ. ಇದನ್ನು ಬಿಹಾರ ಸರಕಾರ ಮೊದಲಿನಿಂದಲೂ ಹೇಳುತ್ತಿದೆ’’ ಎಂದು ಅವರು ನುಡಿದರು.

‘‘ಇದು ಕೇಂದ್ರ ಸರಕಾರದ ಮುಖವಾಡವನ್ನು ಕಳಚಿದೆ. ಇದು ಅದರ ಹತಾಶೆಯನ್ನು ತೋರಿಸಿದೆ. ಬಿಜೆಪಿ ನಾಯಕರೂ ಗೊಂದಲಕ್ಕೊಳಗಾಗಿದ್ದಾರೆ. ಬಿಹಾರದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಜಾತಿ ಗಣತಿಗೆ ಬಿಜೆಪಿ ಕೂಡ ಬೆಂಬಲ ಸೂಚಿಸಿತ್ತು. ಈಗ ಆ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆಯೊಂದು ಮೂಡಿದೆ. ಇದು ಜನಗಣತಿಯಲ್ಲ. ಜನಗಣತಿ ನಡೆಸುವ ಅವರ ಅಧಿಕಾರವನ್ನು ಯಾರು ಪ್ರಶ್ನಿಸಿದ್ದಾರೆ?’’ ಎಂದು ಅವರು ಹೇಳಿದರು.

ಬಿಜೆಪಿಯ ಬಿಹಾರ ಘಟಕವು ಜಾತಿ ಸಮೀಕ್ಷೆಯನ್ನು ಬೆಂಬಲಿಸುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಹೇಳಿದರು.

ಜಾತಿ ಸಮೀಕ್ಷೆ ನಡೆಸಲು ಬಿಹಾರ ಸರಕಾರವು ಜೂನ್ 2ರಂದು ನಿರ್ಧರಿಸಿತ್ತು. ಅದು ಈ ವರ್ಷದ ಮೇ 31ರ ವೇಳೆಗೆ ಸಂಪೂರ್ಣಗೊಳ್ಳಬೇಕಾಗಿತ್ತು. ಮೇ ತಿಂಗಳಲ್ಲಿ ಪಾಟ್ನಾ ಹೈಕೋರ್ಟ್ ಸಮೀಕ್ಷೆಗೆ ತಡೆ ನೀಡಿತು. ಆದರೆ, ಈ ಸಮೀಕ್ಷೆಯ ಅವಧಿಯಲ್ಲಿ ಸಂಗ್ರಹಿಸಲಾದ ಅಂಕಿಅಂಶಗಳನ್ನು ರಕ್ಷಿಸುವುದಾಗಿ ನಿತೀಶ್ ಕುಮಾರ್ ಸರಕಾರ ಭರವಸೆ ನೀಡಿದ ಬಳಿಕ, ಜಾತಿ ಸಮೀಕ್ಷೆಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿತ್ತು.

ಈಗ ಹೈಕೋರ್ಟ್ ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಜಾತಿ ಸಮೀಕ್ಷೆಯ ಫಲಿತಾಂಶವು 2024ರ ಲೋಕಸಭಾ ಚುನಾವಣೆಯ ಮೇಲೆ ಅಗಾಧ ಪರಿಣಾಮವನ್ನು ಬೀರಬಹುದಾಗಿದೆ.

ಜಾತಿ ಸಮೀಕ್ಷೆ ಬಹುತೇಕ ಪೂರ್ಣ: ನಿತೀಶ್ ಕುಮಾರ್

ಕೇಂದ್ರದ ನಿಲುವಿಗೆ ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತನ್ನ ಸರಕಾರ ಜನಗಣತಿ ನಡೆಸುತ್ತಿಲ್ಲ, ಸಮೀಕ್ಷೆ ನಡೆಸುತ್ತಿದೆ ಎಂದರು.

‘‘ನಾವು ವಿವಿಧ ಜಾತಿಗಳ ಜನರ ಸಂಖ್ಯೆಯನ್ನು ಮಾತ್ರ ಎಣಿಸುತ್ತಿಲ್ಲ. ನಾವು ಅವರ ಆರ್ಥಿಕ ಸ್ಥಿತಿಯನ್ನೂ ಸಮೀಕ್ಷೆ ಮಾಡುತ್ತೇವೆ. ಆಗ ನಮ್ಮಲ್ಲಿ ಸರಿಯಾದ ಅಂಕಿಅಂಶಗಳಿರುತ್ತವೆ. ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿದರು. ಸಮೀಕ್ಷಾ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News