ಹಣಕಾಸು ಅವ್ಯವಹಾರ ಆರೋಪ: ಆರ್.ಜಿ.ಕರ್ ಆಸ್ಪತ್ರೆಯ ಮಾಜಿ ವರಿಷ್ಠ ಸಂದೀಪ್ ಘೋಷ್ ವಿರುದ್ಧ ಪ್ರಕರಣ ದಾಖಲು

Update: 2024-08-24 16:13 GMT

ಸಂದೀಪ್ ಘೋಷ್

ಹೊಸದಿಲ್ಲಿ: ಕೋಲ್ಕತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ವಿವಾದಕ್ಕೆ ಗುರಿಯಾಗಿರುವ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ, ವೈದ್ಯಕೀಯ ಕಾಲೇಜ್‌ನಲ್ಲಿ ಆರ್ಥಿಕ ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿ ಶನಿವಾರ ಪ್ರಕರಣ ದಾಖಲಿಸಿದೆ.

ಸಂಸ್ಥೆಯಲ್ಲಿ ನಡೆದಿದೆಯೆನ್ನಲಾದ ಆರ್ಥಿಕ ದುರ್ವವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯವು (ಈ.ಡಿ.) ತನಿಖೆ ನಡೆಸಬೇಕೆಂದು ಕೋರಿ ಆರ್.ಜಿ.ಕರ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಮಾಜಿ ಉಪ ನಿರೀಕ್ಷಕ ಅಖ್ತರ್ ಅಲಿ ಕೋಲ್ಕತಾ ಹೈಕೋರ್ಟ್‌ಗೆ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ಸರಕಾರದ ವಿಶೇಷ ತನಿಖಾ ತಂಡವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಆಗಸ್ಟ್ 9ರಂದು ಕಾಲೇಜ್‌ನ ಸೆಮಿನಾರ್ ಹಾಲ್‌ನಲ್ಲಿ 31 ವರ್ಷ ವಯಸ್ಸಿನ ಸ್ನಾತಕೋತ್ತರ ಕಿರಿಯ ವೈದ್ಯೆಯಯ ಮೃತದೇಹವು ಪತ್ತೆಯಾದ ಎರಡೇ ದಿನಗಳ ಬಳಿಕ ಆರ್.ಜಿ.ಕರ್ ಮೆಡಿಕಕಲ್ ಕಾಲೇಜ್‌ನ ಪ್ರಾಂಶುಪಾಲ ಹುದ್ದೆಗೆ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದರು.

ಆರ್.ಜಿ.ಕರ್ ಮೆಡಿಕಲ್ ಕಾಲೇಜ್‌ನಲ್ಲಿನ ಆರ್ಥಿಕ ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿ ಸಿಬಿಐ ಸಂದೀಪ್ ಘೋಷ್ ಅವರನ್ನು ಸುಮಾರು 88 ತಾಸುಗಳವರೆಗೆ ಪ್ರಶ್ನಿಸಿದೆ ಹಾಗೂ ಅವರನ್ನು ಶನಿವಾರ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಿದೆ. ಘೋಷ್ ಹಾಗೂ ಕೋಲ್ಕತಾ ಕಿರಿಯ ವೈದ್ಯೆಯ ಕೊಲೆ ಪ್ರಕರಣದ ಮುಖ್ಯ ಆರೋಪಿ ಸಂಜಯ್ ರಾಯ್ ಸೇರಿದಂತೆ ಇತರ ಐದು ಮಂದಿಯ ಸುಳ್ಳುಪತ್ತೆ ಪರೀಕ್ಷೆಗೆ ಕೋಲ್ಕತಾ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿತ್ತು.

ಆರ್.ಜಿ.ಕರ್ ಮೆಡಿಕಕಲ್ ಕಾಲೇಜ್‌ನ ಪ್ರಾಂಶುಪಾಲ ಹುದ್ದೆಗೆ ಘೋಷ್ ರಾಜೀನಾಮೆ ನೀಡಿದ ಕೆಲವೇ ತಾಸುಗಳ ಬಳಿಕ ಘೋಷ್ ಅವರು ಕೋಲ್ಕತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ಆದರೆ ಪಶ್ಚಿಮಬಂಗಾಳ ಸರಕಾರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಹಾಗೂ ಕೋಲ್ಕತಾ ಹೈಕೋರ್ಟ್ ಕೂಡಾ ಘೋಷ್ ಅವರ ಮರುನೇಮಕಾತಿಗೆ ಸಂಬಂಧಿಸಿ ರಾಜ್ಯ ಸರಕಾರವನ್ನು ಪ್ರಶ್ನಿಸಿತ್ತು.

ದೀರ್ಘಾವಧಿಯ ರಜೆಯಲ್ಲಿತೆರಳುವಂತೆ ಕೋಲ್ಕತಾ ಹೈಕೋರ್ಟ್ ಘೋಷ್ ಅವರಿಗೆ ಆದೇಶಿಸಿತ್ತು. ಆದರೆ 12 ತಾಸುಗಳೊಳಗೆ ಅವರ ಮರುನೇಮಕವಾಗಿದ್ದನ್ನು ನ್ಯಾಯಾಲಯ ಬಲವಾಗಿ ಆಕ್ಷೇಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News