ಒಮಾನ್ ನಲ್ಲಿ ಪತ್ನಿಯ ಅಕ್ರಮ ಬಂಧನ ಆರೋಪ: ಕೇಂದ್ರದ ಮೊರೆ ಹೋದ ಛತ್ತೀಸ್ ಗಢದ ವ್ಯಕ್ತಿ
ರಾಯ್ಪುರ: ಒಮಾನ್ ನಲ್ಲಿ ಉದ್ಯೋಗದಾತರು ತನ್ನ ಪತ್ನಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಆಪಾದಿಸಿದ ಛತ್ತೀಸ್ ಗಢದ ವ್ಯಕ್ತಿಯೊಬ್ಬರು ಮಹಿಳೆಯ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಪತ್ನಿಯ ಬಿಡುಗಡೆಗೆ ಉದ್ಯೋಗದಾತರು 2 ರಿಂದ 3 ಲಕ್ಷ ರೂಪಾಯಿಯ ಬೇಡಿಕೆ ಮುಂದಿಟ್ಟಿರುವ ವಿಡಿಯೊವನ್ನು ಈ ವ್ಯಕ್ತಿ ಹಂಚಿಕೊಂಡಿದ್ದಾರೆ.
ಜೋಗಿ ಮುಕೇಶ್ ಎಂಬವರಿಂದ ಈ ಸಂಬಂಧ ದೂರು ದಾಖಲಾಗಿದೆ. ಉದ್ಯೋಗಕ್ಕಾಗಿ ಒಮಾನ್ ಗೆ ತೆರಳಿರುವ ತಮ್ಮ ಪತ್ನಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖೇಶ್ ಆಪಾದಿಸಿದ್ದಾರೆ ಎಂದು ದುರ್ಗ್ ಹೆಚ್ಚುವರಿ ಎಸ್ಪಿ ಅಭಿಷೇಕ್ ಝಾ ಸ್ಪಷ್ಟಪಡಿಸಿದ್ದಾರೆ.
ಅಡುಗೆ ಕೆಲಸಕ್ಕಾಗಿ ಪತ್ನಿ ದೀಪಿಕಾ ಕಳೆದ ಮಾರ್ಚ್ ನಲ್ಲಿ ಒಮಾನ್ ಗೆ ತೆರಳಿದ್ದರು ಎಂದು ದುರ್ಗ್ ನಿವಾಸಿಯಾಗಿರುವ ಮುಕೇಶ್ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಿಲೈಯ ಖುರ್ಸಿಪಾರ್ ನ ವ್ಯಕ್ತಿಯೊಬ್ಬರ ಮೂಲಕ ಹೈದರಾಬಾದ್ ನ ದಲ್ಲಾಳಿಯೊಬ್ಬರ ಸಂಪರ್ಕದಿಂದ ಅಲ್ಲಿ ಉದ್ಯೋಗ ಪಡೆಯಲಾಗಿತ್ತು. ಕೇರಳದ ಒಬ್ಬ ಏಜೆಂಟ್ ಒಮಾನ್ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದರು. ಮನೆಯಲ್ಲಿ ಅಡುಗೆ ಕೆಲಸ ಮಾಡಬೇಕಾಗುತ್ತದೆ ಎಂದು ಮೊದಲು ಮಾಹಿತಿ ನೀಡಲಾಗಿತ್ತು. ಆದರೆ ಅಲ್ಲಿ ಮನೆಕೆಲಸದಾಕೆಯ ಕಾರ್ಯವನ್ನು ಮಾಡಿಸಲಾಗುತ್ತಿದೆ. ಇದು ಆರೇಳು ತಿಂಗಳು ಮುಂದುವರಿದಿದ್ದು, ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೆ ಎಂದು ಅವರು ವಿವರ ನೀಡಿದ್ದಾರೆ.