ಶಾಸಕರ ಖರೀದಿ ಆರೋಪ | ಅರವಿಂದ ಕೇಜ್ರಿವಾಲ್, ಆತಿಶಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲು
ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದ ನಾಯಕರು ಮಾಡಿದ ಶಾಸಕರ ಖರೀದಿ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಸಂಪುಟ ಸಚಿವೆ ಆತಿಶಿ ವಿರುದ್ಧ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ.
ದಿಲ್ಲಿಯ ಆಡಳಿತಾರೂಢ ಪಕ್ಷಕ್ಕೆ ರಾಜೀನಾಮೆ ನೀಡಲು ಹಾಗೂ ಸರಕಾರವನ್ನು ಉರುಳಿಸಲು ಆಮ್ ಆದ್ಮಿ ಪಕ್ಷದ 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಕೇಜ್ರಿವಾಲ್ ಅವರು ಜನವರಿ 27ರಂದು ಆರೋಪಿಸಿದ್ದರು.
ದಿಲ್ಲಿಯಲ್ಲಿ ಬಿಜೆಪಿ ‘‘ಆಪರೇಷನ್ ಕಮಲ 2.0’’ ಆರಂಭಿಸಿದೆ ಎಂದು ಅದೇ ದಿನ ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಅವರು ಆರೋಪಿಸಿದ್ದರು. ಅವರು ಕಳೆದ ವರ್ಷದಂತೆ ಈ ವರ್ಷ ಕೂಡ ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀಸಲು ಹಣದ ಆಮಿಷ ಒಡ್ಡಿದ್ದಾರೆ. ಆದರೆ, ವಿಫಲರಾಗಿದ್ದಾರೆ ಎಂದು ಆತಿಶಿ ಹೇಳಿದ್ದರು.
ಬಿಜೆಪಿ ಪಕ್ಷ ಸೇರುವಂತೆ ಕೇಳಿಕೊಂಡಿದೆ. ಇಲ್ಲದೆ ಇದ್ದರೆ, ಒಂದು ತಿಂಗಳ ಒಳಗಾಗಿ ಜಾರಿ ನಿರ್ದೇಶನಾಲಯ(ಈಡಿ)ದಿಂದ ಬಂಧಿಸಲಾಗುವುದು ಎಂದು ಬೆದರಿಕೆ ಒಡ್ಡಿದೆ ಎಂದು ಆತಿಶಿ ಎಪ್ರಿಲ್ 2ರಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ತನ್ಯಾ ಬಾಮ್ನಿಯಲ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ಬಿಜೆಪಿ ದಿಲ್ಲಿ ಘಟಕದ ಮಾಧ್ಯಮ ಮುಖ್ಯಸ್ಥರಾಗಿರುವ ಕಪೂರ್, ಈ ಆರೋಪಗಳು ಸುಳ್ಳು ಹಾಗೂ ಆಧಾರ ರಹಿತ ಎಂದು ಹೇಳಿದ್ದಾರೆ.
ಬಿಜೆಪಿ ದಿಲ್ಲಿ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಬಿಂಬಿಸಲು ಆಪ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಪೂರ್ ಅವರನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಅಮಿತ್ ತಿವಾರಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.