ಅಮಿತ್ ಮಾಳವಿಯಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಆರೆಸ್ಸೆಸ್ ಸದಸ್ಯನ ವಿರುದ್ಧ ರೂ. 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ
ಹೊಸದಿಲ್ಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೆಸ್ಸೆಸ್ ಸದಸ್ಯ ಸನಾತನು ಸಿನ್ಹಾ ಆರೋಪದ ಬೆನ್ನಲ್ಲೇ ಅವರ ವಿರುದ್ಧ ರೂ 10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಇಂದು ಮಾಳವಿಯಾ ಹೂಡಿದ್ದಾರೆ.
ಸಿನ್ಹಾ ಆವರ ಸುಳ್ಳು ಮತ್ತು ನಿಂದನಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್ ಅನ್ನು ತೆಗೆದುಹಾಕಬೇಕು ಎಂದು ಮಾಳವಿಯಾ ತಮ್ಮ ಕಾನೂನು ನೋಟಿಸ್‌ನಲ್ಲಿ ಆಗ್ರಹಿಸಿದ್ದಾರೆ.
“ಈ ಆರೋಪಗಳು ಸಾರ್ವಜನಿಕ ವ್ಯಕ್ತಿಯಾಗಿರುವ ನನ್ನ ಕಕ್ಷಿಗಾರರ ಘನತೆ, ಗೌರವಕ್ಕೆ ಧಕ್ಕೆ ತಂದಿದೆ,” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಉಳಿದುಕೊಂಡಿದ್ದ ವೇಳೆ ಮಾಳವಿಯಾ ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಸಿನ್ಹಾ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದರು.
ಈ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್, ಬಿಜೆಪಿ ಮಾಳವಿಯಾ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
“ಮಾಳವಿಯಾ ಅವರು ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರವಲ್ಲ ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಗಳಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಗಂಭೀರ ಆರೋಪ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಕೇಳಿ ಬಂದಿದೆ. ಮಹಿಳೆಯರಿಗೆ ನ್ಯಾಯ ಸಿಗಬೇಕೆಂದು ಬಿಜೆಪಿಯನ್ನು ಆಗ್ರಹಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.
“ಮಾಳವೀಯ ಅವರು ಪ್ರಮುಖ ಮತ್ತು ಪ್ರಭಾವ ಬೀರಬಹುದಾದ ಹುದ್ದೆಯಲ್ಲಿರುವುದರಿಂದ ಅವರನ್ನು ತಕ್ಷಣ ಅವರ ಹುದ್ದೆಯಿಂದ ಕೈಬಿಡಬೇಕು,” ಎಂದೂ ಸುಪ್ರಿಯಾ ಆಗ್ರಹಿಸಿದ್ದಾರೆ.