ಏರ್ ಬ್ಯಾಗ್ ಇಲ್ಲದ ಕಾರು ಮಾರಾಟ ಆರೋಪ: ಆನಂದ ಮಹಿಂದ್ರಾ ವಿರುದ್ಧ ವಂಚನೆ ಪ್ರಕರಣ ದಾಖಲು

Update: 2023-09-25 15:59 GMT

Mahindra.| Photo : PTI

ಕಾನ್ಪುರ : ಕಾರಿನ ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆಗಳನ್ನು ನೀಡಿದ್ದ ಆರೋಪದಲ್ಲಿ ಆನಂದ್ ಮಹಿಂದ್ರಾ ಮತ್ತು ಮಹಿಂದ್ರಾ ಆ್ಯಂಡ್ ಮಹಿಂದ್ರಾ ಲಿ.ನ 12 ಉದ್ಯೋಗಿಗಳ ವಿರುದ್ಧ ಶನಿವಾರ ಇಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಕಂಪನಿಯು ತನಗೆ ಏರ್ ಬ್ಯಾಗ್ ಅಳವಡಿಸದಿದ್ದ ಕಾರನ್ನು ಮಾರಾಟ ಮಾಡಿತ್ತು ಮತ್ತು ಇದು ಅಪಘಾತದಲ್ಲಿ ತನ್ನ ಮಗನ ಸಾವಿಗೆ ಕಾರಣವಾಗಿದೆ ಎಂದು ದೂರುದಾರ ರಾಜೇಶ್ ಮಿಶ್ರಾ ಆರೋಪಿಸಿದ್ದಾರೆ.

ಮಿಶ್ರಾ 2020ರಲ್ಲಿ ತನ್ನ ಮಗ ಅಪೂರ್ವಗೆ ಉಡುಗೊರೆಯಾಗಿ ನೀಡಲು 17.39 ಲ.ರೂ.ಗಳನ್ನು ಪಾವತಿಸಿ ಸ್ಕಾರ್ಪಿಯೊ ಕಾರನ್ನು ಖರೀದಿಸಿದ್ದರು. 2022, ಜ.14ರಂದು ಅಪೂರ್ವ ತನ್ನ ಸ್ನೇಹಿತರೊಂದಿಗೆ ಲಕ್ನೋದಿಂದ ಕಾನ್ಪುರಕ್ಕೆ ಮರಳುತ್ತಿದ್ದಾಗ ಮಂಜು ಕವಿದ ವಾತಾವರಣದಿಂದಾಗಿ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಅಪೂರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಅಪಘಾತದ ಬಳಿಕ ಜ.29ರಂದು ತಾನು ಕಾರು ಖರೀದಿಸಿದ್ದ ಡೀಲರನ್ನು ಭೇಟಿಯಾಗಿದ್ದ ಮಿಶ್ರಾ ಕಾರಿನಲ್ಲಿಯ ದೋಷಗಳನ್ನು ಎತ್ತಿ ತೋರಿಸಿದ್ದರು. ಅಪಘಾತದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದರೂ ಏರ್ ಬ್ಯಾಗ್ ಅನುಪಸ್ಥಿತಿಯಿಂದಾಗಿ ತನ್ನ ಮಗನ ಸಾವು ಸಂಭವಿಸಿದೆ. ಕಂಪನಿಯು ಸುಳ್ಳು ಭರವಸೆಗಳನ್ನು ನೀಡಿ ತನಗೆ ವಂಚಿಸಿದೆ. ಮಾರಾಟಕ್ಕೆ ಮುನ್ನ ಕಾರನ್ನು ಕೂಲಂಕಶವಾಗಿ ತಪಾಸಣೆ ಮಾಡಿದ್ದರೆ ತನ್ನ ಮಗ ಸಾಯುತ್ತಿರಲಿಲ್ಲ ಎಂದು ಮಿಶ್ರಾ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News