ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಶೇ. 50ಕ್ಕೆ ಇಳಿಕೆ
ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ರಾಜಸ್ಥಾನದ ಕೋಟಾದಲ್ಲಿ 2023ಕ್ಕೆ ಹೋಲಿಸಿದರೆ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಇಳಿಕೆಯಾಗಿದೆ ಎಂದು ಕೋಟಾ ಜಿಲ್ಲಾಡಳಿತ ತಿಳಿಸಿದೆ.
ಆದರೆ, ಅಧಿಕಾರಿಗಳು ಸಂಖ್ಯೆಯ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ. ವರದಿ ಪ್ರಕಾರ ಕೋಟಾದಲ್ಲಿ 2023ರಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2024ರಲ್ಲಿ 17 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲಾಡಳಿತದ ನಿಗಾದಲ್ಲಿ ತರಬೇತು ಸಂಸ್ಥೆಗಳು ಹಾಗೂ ಹಾಸ್ಟೆಲ್‌ಗಳು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿರುವುದು ಆತ್ಮಹತ್ಯೆಗಳ ಸಂಖ್ಯೆ ಕುಸಿತಕ್ಕೆ ಕಾರಣವೆಂದು ಹೇಳಬಹುದು.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ತರಬೇತು ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಶೇ. 50ಕ್ಕೆ ಇಳಿಕೆಯಾಗಿದೆ. ಫಲಿತಾಂಶ ಆಧಾರಿತ ಪ್ರಯತ್ನದ ನಿಟ್ಟಿನಲ್ಲಿ ಇದು ಗಮನಾರ್ಹ ಅಂಕಿ-ಅಂಶ. ಈ ಪೃವೃತ್ತಿ ಭವಿಷ್ಯದಲ್ಲಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕೋಟಾ ಜಿಲ್ಲಾಧಿಕಾರಿ ರವೀಂದ್ರ ಗೋಸ್ವಾಮಿ ತಿಳಿಸಿದ್ದಾರೆ.
‘‘ಡಬ್ಲ್ಯುಎಚ್‌ಒ ನಿಯಮಗಳ ಆಧಾರದಲ್ಲಿ ಹಾಸ್ಟೆಲ್ ವಾರ್ಡನ್‌ಗಳಿಗೆ ಗೇಟ್ ಕಾಯುವ ತರಬೇತು ಹಾಗೂ ಎಸ್‌ಒಎಸ್ ಸಹಾಯ ಸೇವೆಗಳ ಅನುಷ್ಠಾನದಂತಹ ಇತರ ಕ್ರಮಗಳು ಆತ್ಮಹತ್ಯೆ ಪ್ರಕರಣಗಳ ಇಳಿಕೆಗೆ ಕೊಡುಗೆ ನೀಡಿವೆ. ಡಿನ್ನರ್ ವಿತ್ ಕಲೆಕ್ಟರ್, ಸಂವಾದಂತಹ ಕಾರ್ಯಕ್ರಮಗಳ ಮೂಲಕ ತರಬೇತು ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂವಹನ ಅಧಿವೇಶನಗಳು ಹಾಗೂ ಮಹಿಳೆಯರ, ಆಕಾಂಕ್ಷಿ ಬಾಲಕಿಯರ ಸುರಕ್ಷೆಗೆ ಕಾಳಿಕಾ ಸ್ಕ್ವಾಡ್ ನಿಯೋಜನೆ ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ’’ ಎಂದು ಗೋಸ್ವಾಮಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆತಂಕವನ್ನು ನಿವಾರಿಸಲು ‘ಡಿನ್ನರ್ ವಿತ್ ಕಲೆಕ್ಟರ್’ ಹಾಗೂ ‘ಸಂವಾದ್’ನಂತಹ ಕಾರ್ಯಕ್ರಮಗಳ ಮೂಲಕ ಈ ವರ್ಷ ತರಬೇತು ಪಡೆಯುತ್ತಿರುವ 25,000 ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋಟಾದ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಸಾಮಾನ್ಯವಾಗಿ 2 ಲಕ್ಷದಿಂದ 2.5 ಲಕ್ಷ ಇದ್ದುದು, ಈ ವರ್ಷ 85 ಸಾವಿರದಿಂದ 1 ಲಕ್ಷಕ್ಕೆ ಇಳಿಕೆಯಾಗಿದೆ. ಇದು ವಾರ್ಷಿಕ ವರಮಾನ 6,500-7,000 ಕೋ.ರೂ. ನಿಂದ 3,500 ಕೋ.ರೂ.ಗೆ ಇಳಿಕೆಯಾಗಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.