ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ಇದೆ ಎಂಬ ಬಗ್ಗೆ ದಾಖಲೆ ತೋರಿಸಲಿ: ಬಿಜೆಪಿಗೆ ಎಂ.ಲಕ್ಷ್ಮಣ್ ಸವಾಲು
ಮೈಸೂರು: ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಸಾವಿನ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ಇದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದ್ದು, ಹಾಗೇನಾದರೂ ಅವರ ಪಾತ್ರ ಇದೆ ಅಂತಾದರೆ ಯಾವುದಾದರೂ ಒಂದು ದಾಖಲೆ ಇದ್ದರೆ ತೋರಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡುತ್ತಿರುವುದು ಮತ್ತು ಬಿಜೆಪಿ ಆರೋಪಕ್ಕೆ ತಕ್ಕ ಉತ್ತರ ಕೊಡುವುದು ಮತ್ತು ಕಾಂಗ್ರೆಸ್ ಪಕ್ಷದ ಕಟ್ಟಾಳಾದ ಅವರ ಕುಟುಂಬಕ್ಕೆ ತೋಜೋವಧೆ ಮಾಡುವ ಕೆಲಸ ಬಿಜೆಪಿ ಅವರು ಮಾಡುತ್ತಿದ್ದಾರೆ ಎಂದರು.
ಡೆತ್‌ನೋಟ್ ನಲ್ಲಿ ಎಲ್ಲೂ ಕೂಡ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ. ರಾಜು ಕಪನೂರ ಬಿಜೆಪಿ ಮುಖಂಡ ಜೊತೆ ಇದ್ದಾನೆ. ಈತ ಒಬ್ಬ ರೌಡಿ ಶೀಟರ್. ಅವನು ಈಗ ಪ್ರಿಯಾಂಕ್ ಖರ್ಗೆ ಜೊತೆ ಫೋಟೋ ತೆಗೆಸಿದ್ದ ಕಾರಣಕ್ಕೆ ಅವರ ರಾಜಿನಾಮೆ ಕೇಳೋದು ಸರಿನಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ದಲಿತರನ್ನು ಕಂಡರೆ ಆಗಲ್ಲ. ಅವರ ಮೇಲೆ ಏನಾದರೂ ಮಾಡಿ ಕಳಂಕ ತರಲು ಕಾಯುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮೇಲು ಕೂಡ ದ್ವೇಷ ಕಾರುತ್ತಾರೆ. ಬಿಜೆಪಿ, ಆರೆಸ್ಸೆಸ್ ನವರ ಚೆಡ್ಡಿ ತಲೆ ಮೇಲೆ ಇಟ್ಟುಕೊಂಡವನನ್ನ ಮುಂದೆ ಬಿಟ್ಟು ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಿಯಾಂಕ ಖರ್ಗೆ ಅವರು ಬಯೋಟೆಕ್ನಾಲಜಿಯಲ್ಲಿ ಸುಮಾರು 10 ಸಾವಿರ ಕೋಟಿ ಹೂಡಿಕೆ ತಂದಿದ್ದಾರೆ. ಗ್ರಾಮೀಣಾಭಿವೃದ್ಧಿಯಲ್ಲಿ ಅಪಾರವಾದ ಬದಲಾವಣೆಗಳನ್ನ ತಂದು ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದನ್ನ ಸಹಿಸದೆ ಬಿಜೆಪಿ ನಾಯಕರು ಹೊಟ್ಟೆ ಉರಿಯಿಂದ ಈ ರೀತಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಗ ಶರತ್ ಬಳ್ಳಾರಿಯಲ್ಲಿ ಒಂದು ಅಪಘಾತ ಮಾಡಿ ನಾಲ್ವರ ಸಾಯಿಸಿದ ಕೇಸನ್ನೇ ಮುಚ್ಚಿ ಹಾಕಿದ್ರಲ್ಲ ಆಗ ನೀವು ರಾಜಿನಾಮೆ ಕೊಟ್ರಾ? ಕುಣಿಗಲ್ ಬಳಿ ಸಿಟಿ ರವಿ ಇದ್ದ ಕಾರು ಅಪಘಾತ ಮಾಡಿ ನಾಲ್ವರ ಸಾವಿಗೆ ಕಾರಣರಾದರಲ್ಲ ಆಗ ರಾಜಿನಾಮೆ ಕೊಟ್ರಾ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಶಿವಣ್ಣ, ಕೆಪಿಸಿಸಿ ಸಂಯೋಜನ ಎನ್.ಭಾಸ್ಕರ್, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.
ʼಪ್ರಿನ್ಸಸ್ ರಸ್ತೆʼ ಎನ್ನುವುದಕ್ಕೆ ಪಾಲಿಕೆಯಲ್ಲಿ ದಾಖಲೆ ಇಲ್ಲ: ಎಂ.ಲಕ್ಷ್ಮಣ್
ಪಿಕೆಟಿಬಿ ರಸ್ತೆಗೆ ಪ್ರಿನ್ಸಸ್ ರಸ್ತೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಪಾಲಿಕೆಯಲ್ಲಿ ಇಲ್ಲ. ಒಂದು ವೇಳೆ ದಾಖಲೆ ಇದ್ದರೆ ತೋರಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಆ ರಸ್ತೆಗೆ ನೂರಕ್ಕೆ ನೂರು ಸಿದ್ದರಾಮಯ್ಯ ಅವರ ಹೆಸರು ಇಟ್ಟೇ ಇಡುತ್ತೇವೆ. ಸೂಕ್ತ ದಾಖಲೆಗಳು ಇದ್ದರೆ ಪ್ರಿನ್ಸಸ್ ರಸ್ತೆ ಎಂದು ಮುಂದುವರೆಸಲು ನಮ್ಮ ಅಭ್ಯಂತರ ಇಲ್ಲ. ಈಗ ಅದಕ್ಕೆ ಸಂಬಂಧಪಟ್ಟ ದಾಖಲೆ ಇಲ್ಲದ ಕಾರಣ ನಾವು ಸಿದ್ದರಾಮಯ್ಯ ಅವರ ಹೆಸರಿಡಲು ಹೊರಟಿದ್ದೇವೆ. ಅದಕ್ಕೆ ಯಾವ ದೊಣ್ಣೆನಾಯಕರ ಅನುಮತಿಯೂ ಬೇಕಿಲ್ಲ ಎಂದರು.
ರಾಜವಂಶಸ್ಥರ ಮೇಲೆ ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಸಂಸದ ಯದುವೀರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ್, ಯದುವೀರ್ ಡ್ಯುಪ್ಲಿಕೇಟ್ ರಾಜವಂಶಸ್ಥ. ಅವರು ಮೈಸೂರು ಅರಮನೆಗೆ ದತ್ತು ಪುತ್ರ. ಕಾಂಗ್ರೆಸ್ ಪಕ್ಷ ನಿಜವಾದ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ಗೆ ನಾಲ್ಕು ಬಾರಿ ಟಿಕೆಟ್ ಕೊಟ್ಟು ಸಂಸದರನ್ನಾಗಿ ಮಾಡಿದೆ. ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದ ಪಕ್ಷ ಬಿಜೆಪಿಗೆ ಹೋಗಿ ಯದುವೀರ್ ಸೇರಿಕೊಂಡಿದ್ದಾರೆ. ನಾವೇನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.