ಅಸ್ಸಾಂ | 15 ಕೋ.ರೂ.ಮೌಲ್ಯದ ಮಾದಕದ್ರವ್ಯ ವಶ, ಇಬ್ಬರ ಬಂಧನ
Update: 2024-12-29 15:03 GMT
ಗುವಾಹಟಿ: ಮಾದಕ ದ್ರವ್ಯಗಳ ವಿರುದ್ಧ ಪ್ರಮುಖ ಕಾರ್ಯಾಚರಣೆಯಲ್ಲಿ ಅಸ್ಸಾಮಿನ ಕಾಚಾರ್ ಜಿಲ್ಲೆಯಲ್ಲಿ ಸುಮಾರು 15 ಕೋ.ರೂ.ಮೌಲ್ಯದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರವಿವಾರ ತಿಳಿಸಿದ್ದಾರೆ.
ಖಚಿತ ಮಾಹಿತಿಗಳ ಮೇರೆಗೆ ಕಾಚಾರ್ ಪೋಲಿಸರು ಶನಿವಾರ ಘೊಂಗುರ್ ಬೈಪಾಸ್‌ನಲ್ಲಿ ನೆರೆಯ ರಾಜ್ಯದಿಂದ ಬರುತ್ತಿದ್ದ ವಾಹನವೊಂದನ್ನು ತಡೆದು ತಪಾಸಣೆ ನಡೆಸಿದಾಗ ಐದು ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟಿದ್ದ 50,000 ಯಾಬಾ ಮಾತ್ರೆಗಳು ಪತ್ತೆಯಾಗಿವೆ. ಇಬ್ಬರು ಆರೋಪಿಗಳನ್ನು ಬಂಧಿಸಿ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಯಾಬಾ ಥಾಯ್ ಭಾಷೆಯಲ್ಲಿ ’ಉನ್ಮಾದದ ಔಷಧಿ’ ಎಂಬ ಅರ್ಥವನ್ನು ಹೊಂದಿದ್ದು,ಮಾತ್ರೆಯು ಮೆಥಾಂಫೆಟೆಮೈನ್(ಪ್ರಬಲ ಮತ್ತು ವ್ಯಸನಕಾರಕ ಉತ್ತೇಜಕ) ಮತ್ತು ಕೆಫೀನ್ ಸಂಯೋಜನೆಯಾಗಿದೆ.