"ಬಿಜೆಪಿ ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡು ಉಳಿದ ಖಾತೆಗಳನ್ನು ಮಿತ್ರಪಕ್ಷಗಳಿಗೆ ನೀಡಿದೆ": ಪ್ರತಿಪಕ್ಷಗಳಿಂದ ಟೀಕೆ
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಖಾತೆಗಳನ್ನು ಘೋಷಿಸುತ್ತಿದ್ದಂತೆ, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಿಗೆ ಉಳಿದಿರುವ ಮತ್ತು ಬೇಡವಾದ ಖಾತೆಗಳನ್ನು ನೀಡಲಾಗಿದೆ. ಪ್ರಮುಖ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಬಹುಮತ ಗಳಿಸಲು ವಿಫಲವಾಗಿದೆ. ಅದಾಗ್ಯೂ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಬೆಂಬಲದೊಂದಿಗೆ ಕೇಂದ್ರ ಸರ್ಕಾರವನ್ನು ರಚಿಸಿದೆ.
ಹೊಸ ಸಂಪುಟದಲ್ಲಿ ಬಿಜೆಪಿ ಗೃಹ, ರಕ್ಷಣೆ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು, ವಾಣಿಜ್ಯ ಮತ್ತು ರೈಲ್ವೆಯಂತಹ ಪ್ರಮುಖ ಸಚಿವಾಲಯಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಈ ಬಗ್ಗೆ ತಮ್ಮ ಟೀಕೆಯನ್ನು ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು "ಮಿತ್ರಪಕ್ಷಗಳಿಗೆ ಬಿಜೆಪಿ ಅರ್ಥಪೂರ್ಣವಾದ ಯಾವುದನ್ನೂ ನೀಡಲಿಲ್ಲ, ಕೊನೆಗೆ ಉಳಿದ ಖಾತೆಗಳನ್ನು ನೀಡಿದೆ" ಎಂದು ಹೇಳಿದರು.
“ಮೋದಿ 3.0 ಸಚಿವಾಲಯದಲ್ಲಿ ಎನ್‌ಡಿಎ ಪಾಲುದಾರರು (ಮಿತ್ರ ಪಕ್ಷಗಳು) ಅಧಿಕಾರದ ಮೇಲೆ ಹೆಚ್ಚು ಹಿಡಿತವನ್ನು ಹೊಂದಿಲ್ಲ. ಮಿತ್ರಪಕ್ಷಗಳಿಗೆ ಕೊನೆಗೆ ಉಳಿದುಕೊಂಡ ಖಾತೆಗಳನ್ನು ನೀಡಲಾಗಿದೆ, ಬಿಜೆಪಿ ಅವರಿಗೆ ಅರ್ಥಪೂರ್ಣವಾದ ಯಾವ ಖಾತಯನ್ನೂ ಬಿಡಲಿಲ್ಲ. ಲೋಕಸಭೆಯ ಸ್ಪೀಕರ್ ಹುದ್ದೆಯೂ ಬಿಜೆಪಿಯಲ್ಲೇ ಉಳಿಯುತ್ತದೆ ಎಂದು ನೀವು ಬಾಜಿ ಕಟ್ಟಬಹುದು” ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಸಚಿವ ಸಂಪುಟ ಹಂಚಿಕೆಯು ಪ್ರಧಾನ ಮಂತ್ರಿಗೆ "ತಮ್ಮ ಸಮ್ಮಿಶ್ರ ಪಾಲುದಾರರನ್ನು ಗೌರವಿಸುವ ಉದ್ದೇಶವನ್ನು ಹೊಂದಿಲ್ಲ" ಎಂದು ತೋರಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಹೇಳಿದ್ದಾರೆ.
"ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಕ್ಷಗಳೆರಡೂ ಈ ಸರ್ಕಾರದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲು ಸಿದ್ಧವಾಗಿರಬೇಕು." ಎಂದು ಅವರು ಹೇಳಿದ್ದಾರೆ.