ವಿವಾದದ ನಡುವೆಯೇ ಬಾಂಬೆ-ಐಐಟಿಯ ಭೋಜನಶಾಲೆಯಲ್ಲಿ ಸಸ್ಯಾಹಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ

Update: 2023-09-28 15:59 GMT

                                                                    ಐಐಟಿ-ಬಾಂಬೆ | Photo: X

ಮುಂಬೈ: ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಬಾಂಬೆ)ಯ ಹಾಸ್ಟೆಲ್‌ನ ಭೋಜನಗೃಹದ ಕೆಲವು ಭಾಗಗಳನ್ನು ಸಸ್ಯಾಹಾರಿಗಳಿಗೆ ಅನಧಿಕೃತವಾಗಿ ಮೀಸಲಿಟ್ಟಿರುವ ಬಗ್ಗೆ ವಿವಾದ ಭುಗಿಲೆದ್ದಿರುವ ನಡುವೆಯೇ, ಇನ್ಸ್‌ಟಿಟ್ಯೂಟ್ ಆಡಳಿತವು ಸಸ್ಯಾಹಾರಿಗಳಿಗೆ ಪ್ರತ್ಯೇಕವಾದ ಸ್ಥಳವಾಕಾಶವನ್ನು ಅಧಿಕೃತವಾಗಿ ನೀಡುವುದಕ್ಕೆ ಅನುಮತಿ ನೀಡಿದೆ.

12,13 ಹಾಗೂ 14 ಸಂಖ್ಯೆಯ ಹಾಸ್ಟೆಲ್‌ಗಳಿಗಿರುವ ಒಂದೇ ಕ್ಯಾಂಟೀನ್ 6 ಮೇಜುಗಳನ್ನು ಸಸ್ಯಾಹಾರಿಗಳಿಗೆ ಮೀಸಲಾಗಿಡಲಾಗುವುದೆಂದು ಬಾಂಬೆ ಐಐಟಿಯ ಭೋಜನಶಾಲಾ (ಮೆಸ್)ಮಂಡಳಿ ಘೋಷಿಸಿದೆ.

ವಿದ್ಯಾರ್ಥಿಗಳಿಗೆ ‘‘ಅಧಿಕ ಒಳಗೊಳ್ಳುವಿಕೆಯ ವಾತಾವರಣ’’ವನ್ನು ಸೃಷ್ಟಿಸಲು ಈ ನಿರ್ಧಾರವನ್ನು ಕೈಗೊಂಡಿದ್ದಾಗಿ ಮೆಸ್‌ಕೌನ್ಸಿಲ್, ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್ ಸಂದೇಶದಲ್ಲಿ ತಿಳಿಸಿದೆ. ಭೋಜನದ ಸಂದರ್ಭ ಕೆಲವರಿಗೆ ಮಾಂಸಾಹಾರದ ನೋಟ ಹಾಗೂ ವಾಸನೆಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳುಂಟಾಗುವ ಸಾಧ್ಯತೆ’’ ಇದೆಯೆಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಮರ್ಪಕವಾದ ದಂಡಗಳನ್ನು ವಿಧಿಸಲಾಗುವುದು ಎಂದು ಮೆಸ್‌ಕೌನ್ಸಿಲ್ ಎಚ್ಚರಿಕೆ ನೀಡಿದೆ.

ಮೂರು ಹಾಸ್ಟೆಲ್‌ಗಳ ವಾರ್ಡನ್‌ಗಳು ಹಾಗೂ ಮೆಸ್ ಕೌನ್ಸಿಲರ್‌ಗಳು ಸಭೆಯನ್ನು ನಡೆಸಿದ ಬಳಿಕ ಇ ಮೇಲ್ ಸಂದೇಶವನ್ನು ಕಳುಹಿಸಲಾಗಿದೆ.

ಸಾಮಾನ್ಯ ಕ್ಯಾಂಟೀನ್‌ನಲ್ಲಿ 80-100 ಮೇಜುಗಳಿದ್ದು, ಅವುಗಳಲ್ಲಿ ಆರನ್ನು ಸಸ್ಯಾಹಾರಿಗಳಿಗೆ ಮೀಸಲಿಡಲಾಗಿದೆ. ಒಂದು ಮೇಜಿನಲ್ಲಿ ಏಳರಿಂದ ಎಂಟು ಮಂದಿ ಕುಳಿತುಕೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜುಲೈನಲ್ಲಿ ಐಐಟಿ-ಬಾಂಬೆಯ ಹಾಸ್ಟೆಲ್ ಸಂಖ್ಯೆ 12ರಲ್ಲಿ ಸಸ್ಯಾಹಾರಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಭೋಜನಸೇವನೆಯ ಸ್ಥಳವೆಂದು ನಮೂದಿಸಿ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಸಸ್ಯಾಹಾರಿಗಳು ಮಾತ್ರವೇ ಇಲ್ಲಿ ಕುಳಿತುಕೊಳ್ಳಬಹುದಾಗಿದೆ ಎಂದು ಪೋಸ್ಟರ್‌ಗಳಲ್ಲಿ ಘೋಷಿಸಲಾಗಿತ್ತು.

ಹಾಸ್ಟೆಲ್‌ನ ಮೆಸ್‌ನಲ್ಲಿ ಸಸ್ಯಾಹಾರಿಗಳಿಗೆ ಹಾಗೂ ಮಾಂಸಹಾರಿಗಳಿಗೆ ಪ್ರತ್ಯಪ್ರತ್ಯೇಕ ಸ್ಥಳವನ್ನು ನಿಗದಪಡಿಸುವ ನೀತಿಯಿಲ್ಲದಿದ್ದರೂ, ಕೆಲವರು ‘ಸಸ್ಯಾಹಾರಿಗಳಿಗೆ ಮಾತ್ರ’ ಎಂದು ಪೋಸ್ಟರ್‌ಗಳ ಮೂಲಕ ನಮೂದಿಸಿದ್ದ ಸ್ಥಳಗಳಿಂದ ಹೊರತೆರಳುವಂತೆ ಕೆಲವು ವಿದ್ಯಾರ್ಥಿಗಳು ಇತರರನ್ನು ಬಲವಂತ ಪಡಿಸಿದ್ದರೆಂದು ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ ಆಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News