ಅಮಿತ್ ಶಾ ನಕಲಿ ವಿಡಿಯೊ ಪ್ರಕರಣ: ತೆಲಂಗಾಣ ಕಾಂಗ್ರೆಸ್ ಕಾರ್ಯಕರ್ತನ ಬಂಧನ
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿ ಅಂತ್ಯಗೊಳಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ತಿರುಚಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದಲ್ಲಿ ತೆಲಂಗಾಣದ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಾಸ್ತವವಾಗಿ ವಿಡಿಯೊವನ್ನು ತೆಲಂಗಾಣ ಚುನಾವಣಾ ರ್ಯಾಲಿ ವೇಳೆ ದಾಖಲಿಸಲಾಗಿದ್ದು, ಇದರಲ್ಲಿ ದಕ್ಷಿಣ ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಬಿಜೆಪಿ ಅಂತ್ಯಗೊಳಿಸಲಿದೆ ಎಂದು ಶಾ ಹೇಳಿದ್ದರು. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 2007ರಿಂದೀಚೆಗೆ ಮುಸ್ಲಿಮರು ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ ಶೇಕಡ 4ರಷ್ಟು ಮೀಸಲಾತಿ ಪಡೆಯುತ್ತಿದ್ದಾರೆ.
ತಿರುಚಿದ ವಿಡಿಯೊದಲ್ಲಿ ಅಮಿತ್ ಶಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಿದ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಹೇಳುತ್ತಿರುವುದು ಕೇಳಿಸುತ್ತಿದೆ.
ಈ ಸಂಬಂಧ ಶುಕ್ರವಾರ ಪೊಲೀಸರು ಅರುಣ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಈತ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಸಂಚಾಲಕ. ಸ್ಪಿರಿಟ್ ಆಫ್ ಕಾಂಗ್ರೆಸ್ ಎಂಬ ಎಕ್ಸ್ ಖಾತೆಯನ್ನು ಈತ ನಿರ್ವಹಿಸುತ್ತಿದ್ದಾರೆ.