ಆಕ್ಷೇಪಾರ್ಹ ಭಾಷಣದ ಆರೋಪದಡಿ ಎಫ್ ಐಆರ್: ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ಅಲಿಗಢ ವಿವಿ ವಿದ್ಯಾರ್ಥಿ

Update: 2025-02-10 13:29 IST
Photo of Allahabad High Court

ಅಲಹಾಬಾದ್ ಹೈಕೋರ್ಟ್ (PTI)

  • whatsapp icon

ಅಲಹಾಬಾದ್: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಆಕ್ಷೇಪಾರ್ಹ ಭಾಷಣದ ಆರೋಪದಲ್ಲಿ ದಾಖಲಾದ ಎಫ್ಐಆರ್ ಪ್ರಶ್ನಿಸಿ ವಿವಿಯ ವಿದ್ಯಾರ್ಥಿಯೋರ್ವ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಮರು ನಡೆಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ಗಲಭೆ, ದುರ್ನಡತೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಮಿಸ್ಬಾ ಖೈಸರ್ ಎಂಬ ವಿದ್ಯಾರ್ಥಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ಪ್ರಶ್ನಿಸಿ ಇದೀಗ ಮಿಸ್ಬಾ ಖೈಸರ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ʼವಿವಿ ಆಡಳಿತ ಮಂಡಳಿಯ ವಿರುದ್ಧ ಆಕ್ಷೇಪಾರ್ಹ ಭಾಷಣ, ಉಪಕುಲಪತಿಗಳ ವಾಹನ ತಡೆದು ಹಾನಿ ಮಾಡಲು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ ಆರೋಪʼ ವನ್ನು ಮಿಸ್ಬಾ ಖೈಸರ್ ವಿರುದ್ಧ ಹೊರಿಸಲಾಗಿದೆ.

ವಕೀಲರಾದ ಅಲಿ ಬಿನ್ ಸೈಫ್ ಮತ್ತು ಕೈಫ್ ಹಸನ್ ಮೂಲಕ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿಯಲ್ಲಿ, ʼಪರೀಕ್ಷೆಗಳು ಮತ್ತು ಹಾಜರಾತಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 100-125 ವಿದ್ಯಾರ್ಥಿಗಳು ಒಟ್ಟುಗೂಡಿದ್ದೆವು, ಯಾವುದೇ ಪ್ರಚೋದನೆ ನೀಡಿಲ್ಲ. ಎಫ್ಐಆರ್ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ವಿಶ್ವವಿದ್ಯಾನಿಲಯವು ಅರ್ಜಿದಾರ ವಿದ್ಯಾರ್ಥಿ ಸೇರಿದಂತೆ ಇತರ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವುದಲ್ಲದೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆʼ ಎಂದು ವಾದಿಸಲಾಗಿದೆ.

ಪ್ರತಿಭಟನೆಯ ನಂತರ ವಿಶ್ವವಿದ್ಯಾನಿಲಯವು ಕೈಸರ್ ಅವರನ್ನು ಅಮಾನತುಗೊಳಿಸಿದೆ. ವಿವಿ ಕ್ಯಾಂಪಸ್ ಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಹಾಸ್ಟೆಲ್ ನ್ನು ಖಾಲಿ ಮಾಡುವಂತೆ ಆದೇಶಿಸಿದೆ. ಫೆಬ್ರವರಿ 11ರಂದು ಈ ಕುರಿತು ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News