ಆಂಧ್ರ ಮೂಲದ ಪೈಲಟ್ ಪ್ರವಾಸಿಯಾಗಿ ಬಾಹ್ಯಾಕಾಶ ಪ್ರವಾಸಕ್ಕೆ ಸಜ್ಜಾದ ಮೊದಲ ಭಾರತೀಯ
ಹೊಸದಿಲ್ಲಿ: ಜೆಫ್ ಬೆಝೋಸ್ ಒಡೆತನದ ಬ್ಲೂ ಒರಿಜಿನ್ ಕೈಗೊಂಡ ನ್ಯೂ ಶೆಪರ್ಡ್-25 (ಎನ್ಎಸ್-25) ಮಿಷನ್ ಭಾಗವಾಗಿ ಪ್ರವಾಸಿಗಳಾಗಿ ಬಾಹ್ಯಾಕಾಶ ಯಾನ ಕೈಗೊಳ್ಳಲು ಆಂಧ್ರ ಮೂಲದ ಗೋಪಿ ತೋಟಕುರ ಸಜ್ಜಾಗಿದ್ದಾರೆ. ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಲಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ಗೋಪಿ, ಉದ್ಯಮಿ ಹಾಗೂ ಪೈಲಟ್ ಆಗಿದ್ದು, ಇತರ ಐದು ಮಂದಿಯ ಜತೆಗೆ ಭೂ ವಾತಾವರಣದ ಪರಿಧಿಯಿಂದಾಚೆಗೆ ಯಾನ ಕೈಗೊಳ್ಳಲಿದ್ದಾರೆ. ಎನ್ಎಸ್-25ರ ಪ್ರತಿಯೊಬ್ಬ ಸದಸ್ಯರು ತಮ್ಮೊಂದಿಗೆ ಪೋಸ್ಟ್ಕಾರ್ಡ್ ಒಯ್ಯಲಿದ್ದು, ವಿಶ್ವದ ಯುವಜನತೆಗೆ ಕನಸು ಹಾಗೂ ನಿರೀಕ್ಷೆಗಳನ್ನು ಪ್ರತಿನಿಧಿಸಲಿದ್ದಾರೆ.
ಎನ್ಎಸ್-25 ಉಡಾವಣಾ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ಬ್ಲೂ ಒರಿಜಿನ್ ಹೇಳಿದೆ.
ಗೋಪಿ ಹಟ್ರ್ಸ್ಫೀಲ್ಡ್ ಜಾಕ್ಸನ್ ಅಟ್ಲಾಂಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಪ್ರಿಸರ್ವ್ ಲೈಫ್ ಕಾರ್ಪೊರೇಷನ್ ಎಂಬ ಜಾಗತಿಕ ಸಮಗ್ರ ಸುಕ್ಷೇಮ ಮತ್ತು ಅನ್ವಯಿಕ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕರಾಗಿದ್ದಾರೆ. ಎಂಬ್ರಿ-ರಿಡ್ಲ್ ಆರೋನಾಟಿಕಲ್ ವಿಶ್ವವಿದ್ಯಾನಿಲಯದಿಂದ ಆರೋನಾಟಿಕಲ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿರುವ ಅವರು, ಭಾರತದಲ್ಲಿ ಈ ಮುನ್ನ ವೈದ್ಯಕೀಯ ವೈಮಾನಿಕ ಸೇವಾ ಕ್ಷೇತ್ರದಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದರು.
"ವಾಣಿಜ್ಯ ವಿಮಾನಗಳ ಜತೆಗೆ ಗೋಪಿ ಬುಷ್ (ಏರ್ಪ್ಲೇನ್), ಏರೊಬಾಟಕ್ ಮತ್ತು ಸಾಗರ ವಿಮಾನಗಳನ್ನು, ಗ್ಲೈಡರ್ ಹಾಗೂ ಬಿಸಿ ಗಾಳಿ ಬಲೂನುಗಳಲ್ಲೂ ಚಲಾಯಿಸಿದ್ದಾರೆ. ಅಂತರರಾಷ್ಟ್ರೀಯ ವೈದ್ಯಕೀಯ ಜೆಟ್ ಪೈಲಟ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರವಾಸಪ್ರಿಯರಾಗಿರುವ ಅವರು, ಮೌಂಟ್ ಕಿಲಿಮಂಜರೊ ಸಾಹಸಯಾತ್ರೆಯನ್ನೂ ಇತ್ತೀಚೆಗೆ ಕೈಗೊಂಡಿದ್ದರು ಎಂದು ಬ್ಲೂ ಒರಿಜಿನ್ ವಿವರಿಸಿದೆ.