ಆಂಧ್ರಪ್ರದೇಶ: ದೇವರಗಟ್ಟು ಕೋಲು ಕಾಳಗ ಉತ್ಸವ: ಮೂರು ಸಾವು, 100 ಕ್ಕೂ ಅಧಿಕ ಗಾಯ
ಕರ್ನೂಲ್: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಬೆಟ್ಟದಲ್ಲಿ ಬುಧವಾರ ಮುಂಜಾನೆ ನಡೆದ ಬನ್ನಿ ಹಬ್ಬ ಅಥವಾ ಕರ್ರಲ ಸಮಾರಂ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಕೋಲು ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು ಮೂರು ಲಕ್ಷ ಜನರು ದೇವರಗಟ್ಟು ಉತ್ಸವವನ್ನು ವೀಕ್ಷಿಸಲು ನೆರೆದಿದ್ದರು. ಸುಮಾರು 3,000 ಭಕ್ತರು ಕೋಲು ಕಾಳಗದಲ್ಲಿ ಭಾಗವಹಿಸಿದ್ದರು.
ಬೇವಿನ ಮರವೊಂದರ ಮೇಲೆ ಹಬ್ಬವನ್ನು ವೀಕ್ಷಿಸಲು ಹಲವಾರು ಯುವಕರು ಹತ್ತಿದ್ದರಿಂದ ಅದರ ಕೊಂಬೆ ಮುರಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್ಪಿ ಜಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಕೊಂಬೆ ಮೈಮೇಲೆ ಬಿದ್ದಿದ್ದರಿಂದ ಒಬ್ಬರು ಮೃತಪಟ್ಟಿದ್ದರೆ, ಇನ್ನೊಬ್ಬರು ಮರದಿಂದ ನೆಲಕ್ಕೆ ಅಪ್ಪಳಿಸಿದ ರಭಸದಲ್ಲಿ ಮೃತಪಟ್ಟಿದ್ದಾರೆ. ಕರ್ನಾಟಕದ ಬಳ್ಳಾರಿ ಮೂಲದ ಕೆ ಪ್ರಕಾಶ್ ಎಂಬವರು ಎರಡು ಗುಂಪುಗಳ ನಡುವಿನ ಕೋಲು ಕಾಳಗದಲ್ಲಿ ಭಾಗವಹಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ಹೇಳಿದರು.
ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ ಎಸ್ಪಿ, ಅಹಿತಕರ ಘಟನೆಗಳನ್ನು ತಡೆಯಲು ಜಿಲ್ಲಾ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 1,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದರ ಜೊತೆಗೆ, ಬನ್ನಿ ಹಬ್ಬದಲ್ಲಿ ಬಾಂಬ್ ನಿಷ್ಕ್ರಿಯ ದಳಗಳು, ಪ್ರವೇಶ ನಿಯಂತ್ರಣ ತಂಡಗಳು, ಡ್ರೋನ್ ಮತ್ತು 100 ಸಿಸಿಟಿವಿ ಕ್ಯಾಮೆರಾಗಳು, ಡೋರ್-ಫ್ರೇಮ್ ಮತ್ತು ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳು, ಡೀಪ್ ಸರ್ಚ್ ಮೈನ್ ಡಿಟೆಕ್ಟರ್‌ಗಳು ಮತ್ತು ಸ್ಫೋಟಕ ಆವಿ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜಾತ್ರೆಯ ಹಿನ್ನೆಲೆಯ ಕುರಿತು ಮಾತನಾಡಿದ ಮಲೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಿ ಶ್ರೀನಿವಾಸುಲು, “ಭೈರವನ ರೂಪದಲ್ಲಿ ಶಿವನು ಮಣಿ ಮತ್ತು ಮಲ್ಲಾಸುರ ಎಂಬ ಇಬ್ಬರು ರಾಕ್ಷಸರನ್ನು ಕೋಲುಗಳಿಂದ ಕೊಂದಿದ್ದಾನೆ. ಹೋರಾಟದ ಸಮಯದಲ್ಲಿ ಉಂಟಾದ ಗಾಯಗಳು ಮತ್ತು ರಕ್ತವನ್ನು ಜನರು ಒಳ್ಳೆಯ ಶಕುನವೆಂದು ಪರಿಗಣಿಸುತ್ತಾರೆ” ಎಂದಿದ್ದಾರೆ.
ಉತ್ಸವದಲ್ಲಿ ಭಾಗವಹಿಸುವ ಭಕ್ತರು ದೇವರನ್ನು ಹಾಗೂ ರಾಕ್ಷಸರನ್ನು ಪ್ರತಿನಿಧಿಸುವ ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಟ ಮಾಡುತ್ತರಾದರೂ, ಪರಸ್ಪರರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.