ಕೇಂದ್ರ ಸರಕಾರದಿಂದ ಶೀಘ್ರದಲ್ಲಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ನೀತಿ : ಅಮಿತ್ ಶಾ

Update: 2024-11-07 15:48 GMT

ಅಮಿತ್ ಶಾ |  PTI 

ಹೊಸದಿಲ್ಲಿ : ದೇಶದಲ್ಲಿ ಭಯೋತ್ಪಾದನೆ ನಿಗ್ರಹಿಸಲು ಕೇಂದ್ರ ಸರಕಾರ ‘ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ನೀತಿ’ ಹಾಗೂ ಕಾರ್ಯತಂತ್ರವನ್ನು ಶೀಘ್ರದಲ್ಲಿ ರೂಪಿಸಲಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಇಲ್ಲಿ ಭಯೋತ್ಪಾದನೆ ನಿಗ್ರಹ ಸಮಾವೇಶದಲ್ಲಿ ಮಾತನಾಡಿದ ಅವರು, ಗಡಿ ರಹಿತ ಭಯೋತ್ಪಾದನೆಯನ್ನು ನಿಗ್ರಹಿಸಲು ಎಲ್ಲಾ ರಾಜ್ಯ ಹಾಗೂ ಕೇಂದ್ರೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಜಂಟಿ ಕಾರ್ಯತಂತ್ರಗಳನ್ನು ರೂಪಿಸಬೇಕು ಹಾಗೂ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದರು.

ಭಯೋತ್ಪಾದನೆ ನಿರ್ಮೂಲನೆ ಮಾಡಲು ದೇಶ ಬದ್ಧವಾಗಿದೆ ಎಂದು ಒತ್ತಿ ಹೇಳಿದ ಅವರು, ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಸಂಪೂರ್ಣ ಜಗತ್ತು ಈಗ ಒಪ್ಪಿಕೊಂಡಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ದೇಶ ಪ್ರಬಲ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ ಎಂದು ತಿಳಿಸಿದರು.

ಗೃಹ ಸಚಿವಾಲಯ ನೀತಿಯನ್ನು ರೂಪಿಸಬಹುದು. ಆದರೆ, ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ಅದು ಯಶಸ್ವಿಯಾಗಲಾರದು ಎಂದು ಅವರು ಹೇಳಿದರು.

ಗೃಹ ವ್ಯವಹಾರಗಳ ಸಚಿವಾಲಯ ತನ್ನ ಪಾತ್ರವನ್ನು ನಿರ್ವಹಿಸಲಿದೆ. ಆದರೆ, ಮುಖ್ಯ ಹೋರಾಟವನ್ನು ರಾಜ್ಯ ಪೊಲೀಸರು ಮಾಡಬೇಕಾಗಿದೆ. ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಕ್ರಮ ತೆಗೆದುಕೊಳ್ಳಲು ನೆರವು ನೀಡುವ ವರೆಗೆ ಎಲ್ಲಾ ಸಂಸ್ಥೆಗಳು ರಾಜ್ಯಗಳಿಗೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ವಿರುದ್ಧ ಹೋರಾಡಲು ಸಂಸ್ಥೆಗಳನ್ನು ಕಾನೂನಾತ್ಮಕವಾಗಿ ಸುದೃಢಗೊಳಿಸುವ ಅಗತ್ಯತೆ ಕುರಿತು ಕೂಡ ಅವರು ಒತ್ತಿ ಹೇಳಿದರು. ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲು ಕಾನೂನಿನಲ್ಲಿ ಬದಲಾವಣೆ ಮಾಡಿದ ಹಾಗೂ ಯುಎಪಿಎಗೆ ತಿದ್ದುಪಡಿ ತಂದ ಕುರಿತು ಅವರು ಗಮನ ಸೆಳೆದರು.

ಎರಡು ದಿನಗಳ ಈ ಸಮಾವೇಶ ಶುಕ್ರವಾರ ಅಂತ್ಯಗೊಳ್ಳಲಿದೆ. ಭದ್ರತಾ ಪಡೆಗಳು, ತಂತ್ರಜ್ಞರು, ಕಾನೂನು ತಜ್ಞರು, ವಿಧಿ ವಿಜ್ಞಾನ ಪರಿಣತರು ಸೇರಿದಂತೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳು ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News