ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿಗೆ ವಿಶಾಖಪಟ್ಟಣಮ್‌ನಲ್ಲಿ ಭೂಮಿ ಪೂಜೆ

Update: 2024-11-07 16:15 GMT

ಪಿ.ವಿ. ಸಿಂಧು | PC : X \ @Pvsindhu1

ಹೊಸದಿಲ್ಲಿ : ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ‘‘ಅಂತರರಾಷ್ಟ್ರೀಯ ದರ್ಜೆ’’ಯ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ಸ್ಥಾಪಿಸುವ ದೊಡ್ಡ ಕಾರ್ಯವೊಂದಕ್ಕೆ ಕೈಹಾಕಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಮ್ ಈಸ್ಟ್ ಜಿಲ್ಲೆಯ ಅರಿಲೋವ ಎಂಬಲ್ಲಿ ಸ್ಥಾಪನೆಯಾಗುವ ಅಕಾಡೆಮಿಗೆ ಗುರುವಾರ ಗುದ್ದಲಿ ಪೂಜೆ ಮಾಡಲಾಗಿದೆ.

ಅಕಾಡೆಮಿಗಾಗಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರಕಾರವು ಮೂರು ಎಕರೆ ಜಮೀನು ಮಂಜೂರು ಮಾಡಿತ್ತು. ಅಕಾಡೆಮಿಯಲ್ಲಿ ಒಂಭತ್ತು ಸಿಂತೆಟಿಕ್ ಬ್ಯಾಡ್ಮಿಂಟನ್ ಅಂಗಳಗಳು, ಸರ್ವ ಸೌಲಭ್ಯಗಳುಳ್ಳ ವ್ಯಾಯಾಮ ಶಾಲೆ ಮತ್ತು 70 ಮಂದಿ ತಂಗುವ ವ್ಯವಸ್ಥೆ ಇದೆ.

‘‘ನನ್ನ ಅಕಾಡೆಮಿಗೆ ವಿಶಾಖಪಟ್ಟಣಕ್ಕಿಂತ ಉತ್ತಮವಾಗಿರುವ ಇನ್ನೊಂದು ಸ್ಥಳ ಇರಲಿಕ್ಕಿಲ್ಲ. ಆಯ್ದ ಕೆಲವರು ಮಾತ್ರವಲ್ಲ, ಎಲ್ಲಾ ನೈಜ ಪ್ರತಿಭೆಗಳ ಅಗತ್ಯಗಳನ್ನು ಪೂರೈಸುವ ಅಕಾಡೆಮಿಯೊಂದನ್ನು ನಡೆಸುವುದು ನನ್ನ ಕನಸಾಗಿತ್ತು’’ ಎಂದು ‘ಸ್ಪೋರ್ಟ್ಸ್ ಸ್ಟಾರ್’ನೊಂದಿಗೆ ಮಾತನಾಡಿದ ಸಿಂಧು ಹೇಳಿದರು.

‘‘ಈ ಅಕಾಡೆಮಿಯು ಎಲ್ಲಾ ಮಟ್ಟಗಳ ಮತ್ತು ಯಾವುದೇ ವರ್ಗದ ಅತ್ಲೀಟ್‌ಗಳ ಅಂತಿಮ ಗಮ್ಯ ಸ್ಥಾನವಾಗಿರುತ್ತದೆ. ಅವರು ಇಲ್ಲಿ ಒಂದು ಮನೆ ಮತ್ತು ಒಂದು ಮಾರ್ಗದರ್ಶಿಯನ್ನು ಕಾಣುತ್ತಾರೆ. ಮುಂದಿನ ತಲೆಮಾರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಅದರ ಕೆಲಸವಾಗಿದೆ’’ ಎಂದರು.

ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್ ಜೊತೆಗೆ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ತರಬೇತಿ ನೀಡುವ ಯೋಜನೆಯೂ ಇದೆ ಎಂದು ಸಿಂಧು ಅವರ ತಂದೆ ಹಾಗೂ ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ಪಿ.ವಿ. ರಮಣ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News