ಪಿಎಂ ವಿದ್ಯಾಲಕ್ಷ್ಮಿ ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ?

Update: 2024-11-07 15:28 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟವು ಬುಧವಾರ ಅನುಮೋದನೆಯನ್ನು ನೀಡಿದೆ.

►ಅರ್ಹ ಶಿಕ್ಷಣ ಸಂಸ್ಥೆಗಳು

ಯೋಜನೆಯು ರಾಷ್ಟ್ರೀಯ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ನಿರ್ಧರಿಸಿರುವ ದೇಶದ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಅರ್ಹ ಸಂಸ್ಥೆಗಳಲ್ಲಿ ಎನ್‌ಐಆರ್‌ಎಫ್‌ನ ಒಟ್ಟಾರೆ, ವರ್ಗ ನಿರ್ದಿಷ್ಟ ಅಥವಾ ಡೊಮೇನ್-ನಿರ್ದಿಷ್ಟ ರ್ಯಾಂಕಿಂಗ್‌ಗಳಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಎಲ್ಲ ಸರಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು, ಎನ್‌ಐಆರ್‌ಎಫ್‌ನಲ್ಲಿ 101-200ರ ನಡುವೆ ಶ್ರೇಯಾಂಕಗಳನ್ನು ಹೊಂದಿರುವ ರಾಜ್ಯ ಸರಕಾರದ ಶಿಕ್ಷಣ ಸಂಸ್ಥೆಗಳು ಮತ್ತು ಎಲ್ಲ ಕೇಂದ್ರೀಯ ಆಡಳಿತ ಶಿಕ್ಷಣ ಸಂಸ್ಥೆಗಳು ಸೇರಿವೆ.

►ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆಯು ನಿರ್ವಹಿಸುವ ಏಕೀಕೃತ ಪೋರ್ಟಲ್ ‘ಪಿಎಂ-ವಿದ್ಯಾಲಕ್ಷ್ಮಿ’ ಮೂಲಕ ಸರಳಗೊಳಿಸಲಾಗಿದೆ. ಯೋಜನೆಯಲ್ಲಿ ಭಾಗಿಯಾಗುವ ಎಲ್ಲ ಬ್ಯಾಂಕುಗಳು ಬಳಸುವ ಈ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಾಲಗಳು ಮತ್ತು ಬಡ್ಡಿ ಸಹಾಯಧನಕ್ಕಾಗಿ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಸುಗಮ ವಿತರಣೆಗಾಗಿ ಬಡ್ಡಿ ಸಹಾಯಧನವನ್ನು ಇ-ವೋಚರ್ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(ಸಿಬಿಡಿಸಿ) ವ್ಯಾಲೆಟ್ ಮೂಲಕ ಒದಗಿಸಲಾಗುವುದು.

►ಅರ್ಹತಾ ಮಾನದಂಡಗಳು

ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಗಳು ಯೋಜನೆಯಡಿ ವ್ಯಾಖ್ಯಾನಿಸಿರುವಂತೆ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು ಮತ್ತು ವಾರ್ಷಿಕ ಎಂಟು ಲಕ್ಷ ರೂ.ವರೆಗೆ ಕುಟುಂಬ ವರಮಾನವನ್ನು ಹೊಂದಿರಬೇಕು( ಬಡ್ಡಿ ಸಹಾಯಧನ ಲಾಭಕ್ಕಾಗಿ).

ಹೆಚ್ಚುವರಿಯಾಗಿ ಪಿಎಂ-ಯುಎಸ್‌ಪಿ ಸಿಎಸ್‌ಐಎಸ್ ಕಾರ್ಯಕ್ರಮದಡಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ತಾಂತ್ರಿಕ ಅಥವಾ ವೃತ್ತಿಪರ ಕೋರ್ಸಗಳ ವ್ಯಾಸಂಗ ಮಾಡುತ್ತಿರುವ, ವಾರ್ಷಿಕ 4.5 ಲಕ್ಷ ರೂ.ವರೆಗೆ ಕುಟುಂಬ ವರಮಾನ ಹೊಂದಿರುವ ವಿದ್ಯಾರ್ಥಿಗಳು ಮರುಪಾವತಿ ಸ್ತಂಭನ ಅವಧಿಯಲ್ಲಿ 10 ಲಕ್ಷ ರೂ.ವರೆಗಿನ ಶಿಕ್ಷಣ ಸಾಲಗಳ ಮೇಲೆ ಸಂಪೂರ್ಣ ಬಡ್ಡಿ ವಿನಾಯಿತಿಗೆ ಅರ್ಹರಾಗಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News