ಆಂಧ್ರಪ್ರದೇಶ: ಬಾಲಕಿಯ ಸಾಮೂಹಿಕ ಅತ್ಯಾಚಾರ 11 ಮಂದಿಯ ಬಂಧನ

Update: 2024-01-02 17:18 GMT

ಅಮರಾವತಿ: ವಿಶಾಖಪಟ್ಟಣಂನಲ್ಲಿ ಪ್ರತ್ಯೇಕ ಸಂದರ್ಭದಲ್ಲಿ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದ ಆರೋಪದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಆಂಧ್ರಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ತನ್ನನ್ನು ತನ್ನ ಗೆಳೆಯ ಹುಟ್ಟು ಹಬ್ಬ ಆಚರಿಸುವ ನೆಪದಲ್ಲಿ ಡಿಸೆಂಬರ್ 17ರಂದು ವಿಶಾಖಪಟ್ಟಣಂನಲ್ಲಿರುವ ಹೊಟೇಲ್ ಕೊಠಡಿಗೆ ಕರೆದೊಯ್ದ. ಅಲ್ಲಿ ತನ್ನನ್ನು ಅತ್ಯಾಚಾರಗೈದ. ಅನಂತರ ಆತ ತನ್ನ ಗೆಳೆಯರನ್ನು ಹೊಟೇಲ್ ಗೆ ಕರೆಸಿಕೊಂಡ. ಅವರು ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಒಡಿಶಾ ನಿವಾಸಿಯಾಗಿರುವ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಸಾಮೂಹಿಕ ಅತ್ಯಾಚಾರದಿಂದ ನೊಂದ ಬಾಲಕಿ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಅದಕ್ಕಾಗಿ ಆಕೆ ವಿಶಾಖಪಟ್ಟಣಂನ ಆರ್.ಕೆ. ಕಡಲ ತೀರಕ್ಕೆ ತೆರಳಿದ್ದಳು. ಈ ಸಂದರ್ಭ ಕಡಲ ತೀರದಲ್ಲಿದ್ದ ಫೋಟೊಗ್ರಾಫರ್ ಓರ್ವ ಗೆಳೆಯನಾದ, ಎಂದು ವಿಶಾಖಪಟ್ಟಣಂ ವಲಯ-1ರ ಪೊಲೀಸ್ ಉಪ ಆಯುಕ್ತ ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಬಾಲಕಿಗೆ ಧೈರ್ಯ ತುಂಬಿದ ಫೋಟೊಗ್ರಾಫರ್ ಆಕೆಯನ್ನು ವಸತಿ ಗೃಹಕ್ಕೆ ಕರೆದೊಯ್ದಿದ್ದಾನೆ ಹಾಗೂ ಅತ್ಯಾಚಾರ ಎಸಗಿದ್ದಾನೆ. ಅನಂತರ ಆತನ ಗೆಳೆಯರನ್ನು ಕರೆಸಿಕೊಂಡಿದ್ದಾನೆ. ಅವರು ಆಕೆಯನ್ನು ಇನ್ನೊಂದು ಕೊಠಡಿಗೆ ಕರೆದೊಯ್ದು ನಿರಂತರ ಎರಡು ದಿನಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅನಂತರ ಬಾಲಕಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಬಾಲಕಿಯ ಹೆತ್ತವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಹೆತ್ತವರಿಂದ ಡಿಸೆಂಬರ್ 18ರಂದು ಸ್ವೀಕರಿಸಿದ ದೂರಿನ ಆಧಾರದಲ್ಲಿ ನಾವು ನಾಪತ್ತೆ ಪ್ರಕರಣ ದಾಖಲಿಸಿಕೊಂಡೆವು. ಅದೇ ದಿನ ತನಿಖೆ ಆರಂಭಿಸಿದೆವು. ಬಾಲಕಿ ಒಡಿಶಾದಲ್ಲಿ ಇದ್ದಾಳೆ ಎಂದು ನಾವು ಮಾಹಿತಿ ಸ್ವೀಕರಿಸಿದೆವು. ಕೂಡಲೇ ನಮ್ಮ ಪೊಲೀಸ್ ತಂಡ ಅಲ್ಲಿಗೆ ತೆರಳಿ ಡಿಸೆಂಬರ್ 25ರಂದು ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ನಾಪತ್ತೆ ಪ್ರಕರಣವನ್ನು ಅತ್ಯಾಚಾರ ಪ್ರಕರಣವಾಗಿ ಪರಿವರ್ತಿಸಲಾಗಿದೆ. ಅಲ್ಲದೆ, ಪೋಕ್ಸೊವನ್ನು ಕೂಡ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News