ರಾಜ್ಯಪಾಲರು ರಾಜಕೀಯದ ಬಗ್ಗೆ ಮಾತನಾಡಬಾರದು: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ಚೆನ್ನೈ: ಇತ್ತೀಚೆಗೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ವಿವಾದಿತ ರಾಜ್ಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಆದೇಶ ವಾಪಸ್ ಪಡೆದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ರಾಜ್ಯಪಾಲರು ರಾಜಕಾರಣದ ಬಗ್ಗೆ ಮಾತನಾಡಬಾರದು ಎಂದಿದ್ದಾರೆ.
ಬುಧವಾರ ವಿಲ್ಲುಪುರಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು “ರಾಜ್ಯದ ಪ್ರತಿಯೊಂದು ಸಮಸ್ಯೆಯ ಬಗ್ಗೆ ಮಾತನಾಡಲು ರಾಜ್ಯಪಾಲರು ರಾಜಕಾರಣಿಯಲ್ಲ,” ಎಂದು ಹೇಳಿದ್ದಾರೆ.
ತೆಲಂಗಾಣ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್ ಅವರಂತೆ ರವಿ ಕೂಡ ಮಾಧ್ಯಮದೊಂದಿಗೆ ಹೆಚ್ಚು ಸಂವಹನ ನಡೆಸಬೇಕೇ ಎಂದು ಪತ್ರಕರ್ತರ ಪ್ರಶ್ನೆಗೆ ಅಣ್ಣಾಮಲೈ ಮೇಲಿನಂತೆ ಹೇಳಿದ್ದಾರೆ.
“ನಮ್ಮ ನಿಲುವೇನೆಂದರೆ ರಾಜ್ಯಪಾಲರು ಮಾಧ್ಯಮವನ್ನು ಭೇಟಿಯಾಗಬಾರದು ಏಕೆಂದರು ಅವರು ರಾಜಕೀಯ ಮಾತನಾಡಬಾರದು. ಕೇಂದ್ರ ಆಡಳಿತ ಪಕ್ಷದ ರಾಜ್ಯ ಅಧ್ಯಕ್ಷನಾಗಿ ನಾನಿದ್ದರೂ, ನನ್ನ ಅಭಿಪ್ರಾಯವೆಂದರೆ ರಾಜ್ಯಪಾಲರು ರಾಜಕೀಯದ ಬಗ್ಗೆ ಮಾತನಾಡಿದರೆ ಅದು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ,” ಎಂದು ಅಣ್ಣಾಮಲೈ ಹೇಳಿದರು.