ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು: ನಾಲ್ಕೇ ತಿಂಗಳಲ್ಲಿ ಎಂಟನೇ ಚೀತಾ ಬಲಿ

Update: 2023-07-14 12:32 GMT

ಸಾಂದರ್ಭಿಕ ಚಿತ್ರ (PTI)

ಭೋಪಾಲ್:‌ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಗಂಡು ಚೀತಾ ಮೃತಪಟ್ಟಿದೆ. ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಸಾವನ್ನಪ್ಪುತ್ತಿರುವ ಎಂಟನೇ ಚೀತಾ ಇದು. ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕನ್ ಮೂಲದ ಚೀತಾ ʼಸೂರಜ್ʼ ಶವವಾಗಿ ಪತ್ತೆಯಾಗಿದೆ.

ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರವಷ್ಟೇ ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಹೆಣ್ಣು ಚೀತಾಗಳೊಂದಿಗಿನ ಹಿಂಸಾತ್ಮಕ ಕಾದಾಟದಿಂದ ತೀವ್ರ ಗಾಯಗೊಂಡಿದ್ದ ತೇಜಸ್‌ ಚೇತರಿಸಿಕೊಳ್ಳದೆ ಮೃತಪಟ್ಟಿದೆ ಎಂದು ಚೀತಾದ ಮರಣೋತ್ತರ ಪರೀಕ್ಷೆ ವರದಿ ಹೇಳಿತ್ತು. ಅದಾಗಿ, ಮೂರೇ ದಿನದಲ್ಲಿ ಸೂರಜ್‌ ಎನ್ನುವ ಚೀತಾ ಮೃತಪಟ್ಟಿದೆ.

ಮಾರ್ಚ್ 27 ರಂದು, ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು, ಎಪ್ರಿಲ್ 23 ರಂದು, ಉದಯ್ ಹೃದಯ‌ ಹಾಗೂ ಶ್ವಾಸಕೋಶದ ವೈಫಲ್ಯದಿಂದ ಹಾಗೂ ಮೇ 9 ರಂದು, ದಕ್ಷ ಎಂಬ ಹೆಣ್ಣು ಚೀತಾ ಮೃತಪಟ್ಟಿತ್ತು. ಎರಡು ಚೀತಾ ಮರಿಗಳು ಮೇ 25 ರಂದು "ತೀವ್ರ ಹವಾಮಾನ ಪರಿಸ್ಥಿತಿ ಮತ್ತು ನಿರ್ಜಲೀಕರಣ" ದಿಂದ ಸಾವನ್ನಪ್ಪಿವೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದ ಚೀತಾ ಪುನಶ್ಚೇತನ ಯೋಜನೆಗೆ ಸೂರಜ್‌ ಸಾವು ಮತ್ತೊಂದು ಆಘಾತ ತಂದಿದೆ.

ಮೇ ತಿಂಗಳಲ್ಲಿ, ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಅವರು ಚೀತಾಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಭಾರತ ಸರ್ಕಾರದ ಯೋಜನೆಯಿಂದಾಗಿ ಇನ್ನೂ ಹೆಚ್ಚಿನ ಚೀತಾಗಳು ಸಾಯಲಿವೆ ಎಂದು ಅವರು ಹೇಳಿದ್ದರು.‌

ಅದರಲ್ಲೂ ಮರುಸಂತತಿ ಮಾಡುವ ಪ್ರಾಜೆಕ್ಟ್‌ಗಳ ವೇಳೆ ಹೆಚ್ಚಿನ ಚೀತಾಗಳು ಸಾವು ಕಾಣುತ್ತವೆ. ಯಾಕೆಂದರೆ, ಚೀತಾಗಳು ಅರಣ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವಾಗ ಚಿರತೆ ಹಾಗೂ ಹುಲಿಗಳಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸುತ್ತದೆ. ಇದು ಚೀತಾಗಳ ಸಾವಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News