ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ
ಕೋಟಾ: ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೋರ್ವಳು ಕೋಟಾ ಜಿಲ್ಲೆಯ ಮಹಾವೀರ ನಗರದಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಕೋಟಾದಲ್ಲಿ ನೀಟ್ ತರಬೇತಿ ಪಡೆಯುತ್ತಿರುವ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ 29ನೇ ಪ್ರಕರಣ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ನಿಶಾ ಯಾದವ್ (21) ಎಂದು ಗುರುತಿಸಲಾಗಿದೆ. ಈಕೆ ಉತ್ತರಪ್ರದೇಶದ ಔರಾಯಿಯಾ ಜಿಲ್ಲೆಗೆ ಸೇರಿದವರು. ಈಕೆ ನಗರದ ಮಹಾವೀರ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು.
ನಿಶಾ ತಂದೆ ಬುಧವಾರ ತಡ ರಾತ್ರಿ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು. ಆದರೆ, ನಿಶಾ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಹಾಸ್ಟೆಲ್ ನ ಸಿಬ್ಬಂದಿಗೆ ಕರೆ ಮಾಡಿದ್ದರು. ತಾನು ನಿಶಾಳೊಂದಿಗೆ ಮಾತನಾಡಲು ಬಯಸಿರುವುದನ್ನು ಆಕೆಗೆ ತಿಳಿಸುವಂತೆ ವಿನಂತಿಸಿದ್ದರು. ಅದರಂತೆ ಸಿಬ್ಬಂದಿ ನಿಶಾಳ ಕೊಠಡಿಯ ಕರೆಗಂಟೆ ಒತ್ತಿದ್ದರು. ಆದರೆ, ನಿಶಾ ಬಾಗಿಲು ತೆರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊಠಡಿಯ ಬಾಗಿಲು ಒಡೆದಿದ್ದರು. ಆಗ ನಿಶಾಳ ಮೃತದೇಹ ಸೀಲಿಂಗ್ ಫ್ಯಾನ್ ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಕೋಟಾದ ಹಿರಿಯ ಪೊಲೀಸ್ ಅಧಿಕಾರಿ, ಕೋಟಾದಲ್ಲಿ ಆತ್ಮಹತ್ಯೆ ತಡೆ ಸಾಧನ ಅಳವಡಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಆದರೆ, ನಿಶಾ ಕೊಠಡಿಯಲ್ಲಿ ಅದನ್ನು ಅಳವಡಿಸಿಲ್ಲ ಎಂದಿದ್ದಾರೆ.
ಕಳೆದ ಮಂಗಳವಾರ (ನವೆಂಬರ್ 27) ಇನ್ನೋರ್ವ ನೀಟ್ ಆಕಾಂಕ್ಷಿ ಫರೀದ್ ಹುಸೈನ್ ಆತ್ಮಹತ್ಯೆಗೆ ಶರಣಾಗಿದ್ದ.