ಐಸಿಐಸಿಐ ಬ್ಯಾಂಕ್-ವೀಡಿಯೊಕಾನ್ ಸಾಲ ಪ್ರಕರಣ: ಕೊಚ್ಚರ್ ದಂಪತಿ ಬಂಧನ ಕಾನೂನುಬಾಹಿರ ಎಂದ ಬಾಂಬೆ ಹೈಕೋರ್ಟ್

Update: 2024-02-07 15:28 GMT

ಬಾಂಬೆ ಹೈಕೋರ್ಟ್

ಮುಂಬೈ: ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕಿನ ಮಾಜಿ ಆಡಳಿತ ನಿರ್ದೇಶಕಿ ಚಂದಾ ಕೊಚ್ಚರ್ ಮತ್ತು ಅವರ ಉದ್ಯಮಿ ಪತಿ ದೀಪಕ ಕೊಚ್ಚರ್ ಅವರನ್ನು ಸಿಬಿಐ ಬಂಧಿಸಿರುವುದು ಕಾನೂನುಬಾಹಿರವಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ಪ್ರಕರಣದಲ್ಲಿ ದಂಪತಿಯ ಬಂಧನದ ಬೆನ್ನಿಗೇ ಜನವರಿ 2023ರಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿ ಇನ್ನೊಂದು ಪೀಠವು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್.ಆರ್.ಬೋರಕರ್ ಅವರ ವಿಭಾಗೀಯ ಪೀಠವು ಮಂಗಳವಾರ ದೃಢೀಕರಿಸಿತು.

3,250 ಕೋಟಿ ರೂ.ಗಳ ವೀಡಿಯೊಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 2022,ಡಿ.23ರಂದು ಕೊಚ್ಚರ್ ದಂಪತಿಯನ್ನು ಬಂಧಿಸಿತ್ತು.

ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕೊಚ್ಚರ್ಗಳು ಅದನ್ನು ಅಕ್ರಮವೆಂದು ಘೋಷಿಸುವಂತೆ ಕೋರಿದ್ದರು. ಮಧ್ಯಂತರ ಆದೇಶದ ಮೂಲಕ ತಮ್ಮನ್ನು ಬಿಡುಗಡೆಗೊಳಿಸುವಂತೆಯೂ ಅವರು ಕೋರಿದ್ದರು.

2023,ಜ.9ರಂದು ತನ್ನ ಮಧ್ಯಂತರ ಆದೇಶದಲ್ಲಿ ಕೊಚ್ಚರ್ ದಂಪತಿಗೆ ಜಾಮೀನು ಮಂಜೂರು ಮಾಡಿದ್ದ ಉಚ್ಚ ನ್ಯಾಯಾಲಯವು,ವಿವೇಚನೆಯನ್ನು ಬಳಸದೆ ಬೇಕಾಬಿಟ್ಟಿಯಾಗಿ ಅವರನ್ನು ಬಂಧಿಸಿದ್ದಕ್ಕಾಗಿ ಸಿಬಿಐ ಅನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು.

ಮಂಗಳವಾರ ನ್ಯಾ.ಪ್ರಭುದೇಸಾಯಿ ನೇತೃತ್ವದ ಪೀಠವು ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿತು ಮತ್ತು ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸುವ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ದೃಢಪಡಿಸಿತು.

ಕೊಚ್ಚರ್ಗಳಲ್ಲದೆ ವೀಡಿಯೊಕಾನ್ ಸಮೂಹದ ಸ್ಥಾಪಕ ವೇಣುಗೋಪಾಲ ಧೂತ್ ಅವರನ್ನೂ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಉಚ್ಚ ನ್ಯಾಯಾಲಯವು ತನ್ನ ಜನವರಿ 2023ರ ಮಧ್ಯಂತರ ಆದೇಶದಲ್ಲಿ ಅವರಿಗೂ ಜಾಮೀನು ಮಂಜೂರು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News