ಅಸ್ಸಾಂ ನಲ್ಲಿ ಐಸಿಸ್ ಭಾರತ ಮುಖ್ಯಸ್ಥನ ಬಂಧನ : ವರದಿ

Update: 2024-03-21 04:13 GMT

ಹಾರಿಸ್ ಫಾರೂಕಿ |  ರೆಹಾನ್ (Photo: NDtv)

ಗುವಾಹತಿ: ಐಸಿಸ್ ಸಂಘಟನೆಯ ಭಾರತ ಮುಖ್ಯಸ್ಥ ಎಂದು ಹೇಳಲಾದ ಹಾರಿಸ್ ಫಾರೂಕಿ ಮತ್ತು ಆತನ ಸಹಚರನೊಬ್ಬನನ್ನು ಅಸ್ಸಾಂ ವಿಶೇಷ ಕಾರ್ಯಪಡೆ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂನ ಧುಬ್ರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ತನಿಖಾ ತಂಡಕ್ಕೆ ಬೇಕಾದ ಈ ಪ್ರಮುಖರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಐಸಿಸ್ ನ ಇಬ್ಬರು ಸದಸ್ಯರು ನೆರೆಯ ರಾಷ್ಟ್ರದಲ್ಲಿ ಠಿಕಾಣಿ ಹೂಡಿದ್ದಾರೆ ಮತ್ತು ದೇಶದ್ರೋಹ ಚಟುವಟಿಕೆ ನಡೆಸಲು ಧುಬ್ರಿ ವಲಯದ ಮೂಲಕ ಭಾರತವನ್ನು ಪ್ರವೇಶಿಸಲು ಹುನ್ನಾರ ನಡೆಸಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಲಾಗಿತ್ತು ಎಂದು ವರದಿಯಾಗಿದೆ.

ಹಾರಿಸ್ ಫಾರೂಕಿ ಅಲಿಯಾಸ್ ಹಾರಿಸ್ ಅಜ್ಮಲ್ ಫಾರೂಕಿ ಐಸಿಸ್ ಸಂಘಟನೆಯ ಭಾರತೀಯ ಮುಖ್ಯಸ್ಥ. ಆತನ ನಿಕಟವರ್ತಿ ರೆಹಾನ್ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಕಾರ್ಯಾಚರಣೆ ನಡೆಸಿದ ಐಜಿಪಿ ಪಾರ್ಥಸಾರಥಿ ಮಹಾಂತ ನೇತೃತ್ವದ ವಿಶೇಷ ಕಾರ್ಯಪಡೆ ಇಬ್ಬರನ್ನು ಬಂಧಿಸಿದೆ. ಉಗ್ರರು ಗಡಿ ದಾಟಿದ ಬಳಿಕ ಧುರ್ಭಿಯ ಧರ್ಮಶಾಲಾ ಬಳಿ ಬಂಧಿಸಲಾಯಿತು.

ಐಸಿಸ್ ಭಾರತದಲ್ಲಿ ಸಂಘಟನೆಗೆ ನೇಮಕ ಮಾಡಿಕೊಳ್ಳುವ ಸಂಚು ಹೂಡಿರುವ ಬಗ್ಗೆಯೂ ಸುಳಿವು ಲಭ್ಯವಾಗಿದೆ. ಜತೆಗೆ ದೇಶದ ವಿವಿಧ ಕಡೆಗಳಲ್ಲಿ ಇಐಡಿ ಸ್ಫೋಟಗಳನ್ನು ನಡೆಸಲೂ ಉದ್ದೇಶಿಸಿತ್ತು ಎಂಬ ಅಂಶ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News