ವಿಡಿಯೋ ಕಾನ್ಫರೆನ್ಸ್ ಮೂಲಕ ಈಡಿ ವಿಚಾರಣೆಗೆ ಹಾಜರಾಗಲು ಸಿದ್ಧ: ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ತನಗೆ ಜಾರಿ ನಿರ್ದೇಶನಾಲಯ (ಈಡಿ) ಜಾರಿ ಮಾಡಿರುವ ಸಮನ್ಸ್ ಗಳು ಕಾನೂನುಬಾಹಿರ ಎಂದು ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾರ್ಚ್ 12ರ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲು ಸಿದ್ಧ ಎಂದು ಹೇಳಿದ್ದಾರೆ.
ವಿಡಿಯೋ ಸಂವಾದದ ಮೂಲಕ ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಆದರೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಖುದ್ದು ವಿಚಾರಣೆಗೆ ಒಳಪಡಿಸಬೇಕು ಎಂದು ಜಾರಿ ನಿರ್ದೇಶನಾಲಯವು ಪಟ್ಟು ಹಿಡಿದಿದೆ. ವಿಡಿಯೋ ಸಂವಾದದ ಮೂಲಕ ವಿಚಾರಣೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅದು ಪ್ರತಿಪಾದಿಸಿದೆ.
ಮಾರ್ಚ್ 4ರಂದು ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಫೆಬ್ರವರಿ 27ರಂದು ನೀಡಿದ್ದ ಎಂಟನೆ ಸಮನ್ಸ್ ನಂತರ ಈ ಬೆಳವಣಿಗೆ ನಡೆದಿದೆ.
ಈ ತನಿಖೆಯು ದಿಲ್ಲಿ ಅಬಕಾರಿ ನೀತಿಯ ನಿರೂಪಣೆ ಹಾಗೂ ಜಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಸುತ್ತ ಸುತ್ತುತ್ತಿದೆ. ಅಬಕಾರಿ ನೀತಿ ನಿರೂಪಣೆ ಹಾಗೂ ಲಂಚ ಪಡೆಯಲಾಗಿದೆ ಎಂಬ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ರಿಂದ ಹೇಳಿಕೆಯನ್ನು ಬಯಸುತ್ತಿದೆ.